Index   ವಚನ - 4    Search  
 
ಆಚಾರವೆಂಬುದು ಆಗೋಚರ ನೋಡಯ್ಯಾ, ಆರಿಗೆಯೂ ಸಾಧ್ಯವಲ್ಲ. ಮರ್ತ್ಯಲೋಕದಲ್ಲಿ ಆ ಸದಾಚಾರದ ಬೆಳವಿಗೆಯ ಮಾಡಲೆಂದು ಬಸವಣ್ಣ ಬಂದು ಭಕ್ತಿಸ್ಥಲವ ಹರಹಿದ. ಗುರು ಲಿಂಗ ಜಂಗಮ ದಾಸೋಹ ಪಾದೋದಕ ಪ್ರಸಾದದ ಹಾದಿಯನೆಲ್ಲರಿಗೆ ತೋರಿದ. ಶಿವಾಚಾರವ ಬೆಳವಿಗೆಯ ಘನವನಹುದಲ್ಲವೆಂದು ಬಿಜ್ಜಳ ತರ್ಕಿಸಲು, ಅನಂತ ಮುಖದಿಂದ ಒಡಂಬಡಿಸಿ ಅಹುದೆನಿಸಿದ. ಬಂದ ಮಣಿಹ ಪೂರೈಸಿತ್ತೆಂದು ಲಿಂಗದೊಳಗೆ ಬಗಿದು ಹೊಕ್ಕಡೆ, ಹಿಂದೆ ಲೋಕವರಿದು ಬದುಕಬೇಕೆಂದು ಸೆರಗ ಕೊಟ್ಟ. ನಾನು ಹಿಂದುಳಿದಹಳೆಂದು ಮುಂದಣ ಗತಿಯ ತೋರಿ, ಬಸವಣ್ಣಪ್ರಿಯ ಚೆನ್ನಸಂಗಯ್ಯನಲ್ಲಿ ತನ್ನ ಪ್ರಸನ್ನದೊಳಗೆ ಇಂಬಿಟ್ಟುಕೊಂಡನು ಎನ್ನ ಹೆತ್ತ ತಂದೆ ಸಂಗನಬಸವಣ್ಣನು.