ಗುರು ಸಂಬಂಧಿ ಗುರುಭಕ್ತಯ್ಯನು.
ಲಿಂಗ ಸಂಬಂಧಿ ಪ್ರಭುದೇವರು.
ಜಂಗಮ ಸಂಬಂಧಿ ಸಿದ್ಧರಾಮನು.
ಪ್ರಸಾದ ಸಂಬಂಧಿ ಮರುಳಶಂಕರದೇವರು.
ಪ್ರಾಣಲಿಂಗ ಸಂಬಂಧಿ ಅನಿಮಿಷದೇವರು.
ಶರಣ ಸಂಬಂಧಿ ಘಟ್ಟಿವಾಳಯ್ಯನು.
ಐಕ್ಯ ಸಂಬಂಧಿ ಅಜಗಣ್ಣಯ್ಯನು.
ಸರ್ವಾಚಾರ ಸಂಬಂಧಿ ಚೆನ್ನಬಸವಣ್ಣನು.
ಇಂತಿವರ ಸಂಬಂಧ ಎನ್ನ ಸರ್ವಾಂಗದಲ್ಲಿ ನಿಂದು
ಬಸವಣ್ಣಪ್ರಿಯ ಚೆನ್ನಸಂಗಯ್ಯನ
ಹೃದಯಕಮಲದಲ್ಲಿ ನಿಜನಿವಾಸಿಯಾಗಿದ್ದೆನು.