Index   ವಚನ - 18    Search  
 
ಅನಾದಿ ಪರಶಿವನಿಂದ ಸಾಕಾರಲೀಲೆಯ ಧರಿಸಿ, ಮರ್ತ್ಯಕ್ಕವತರಿಸಿ, ಶ್ರೀ ಗುರುಲಿಂಗಜಂಗಮದಿಂದ ವೇಧಾ-ಮಂತ್ರ-ಕ್ರಿಯಾದೀಕ್ಷೆಯ ಪಡೆದು, ಲಿಂಗಾಂಗಸಮರಸಾನಂದವನರಿದು, ತನ್ನ ಸ್ವಸ್ವರೂಪ ನಿಲುಕಡೆಯ ತಿಳಿದು, ಸತ್ಯ-ಸದಾಚಾರ-ಸನ್ಮಾರ್ಗದ ಗೊತ್ತನರಿದು, ಪಂಚಸೂತಕಪಾತಕ, ಆರುವೈರಿ, ಅಷ್ಟಮದಂಗಳಡಿಮೆಟ್ಟಿ, ಆಚರಿಸುವ ಭಕ್ತಗಣಂಗಳು ಇಂತಿಷ್ಟು ಸತ್ತುಚಿತ್ತಾನಂದನಿತ್ಯಪರಿಪೂರ್ಣ ಅವಿರಳಾನಂದ ನಿಜಾಚರಣೆಯನರಿಯದ ಗುರುವಾಗಲಿ, ಲಿಂಗವಾಗಲಿ, ಜಂಗಮವಾಗಲಿ, ಶರಣನಾಗಲಿ, ಭಕ್ತನಾಗಲಿ, ಪ್ರಸಾದಿಯಾಗಲಿ, ಅವರಿಂದ ಪಾದೋದಕಪ್ರಸಾದವ ಕೊಂಡರೆ ಯಮದಂಡಣೆಗೊಳಗು ನೋಡಾ, ಅಂತ್ಯದಲ್ಲಿ ರೌರವ, ಎಂದಾತನಂಬಿಗರ ಚೌಡಯ್ಯ.