Index   ವಚನ - 24    Search  
 
ಅಯ್ಯ! ಶ್ರೀಗುರುಲಿಂಗಜಂಗಮದ ವೇಧಾಮಂತ್ರಕ್ರಿಯಾದೀಕ್ಷೆಗೆ ಹೊರಗಾದ ಭುವನದ ಶೈವದೈವದಾರ್ಚನೆ ಪೂಜೆಯ ಮಾಡಿ, ಅದರುಚ್ಛಿಷ್ಟವ ಭುಂಜಿಸುವದಂಗಾಚಾರ. ಅದನುಳಿದು ಶುದ್ಧಸಿದ್ಧಪ್ರಸಿದ್ಧಪ್ರಸಾದಸ್ವರೂಪವಾದ ಅನಾದಿಗುರುಲಿಂಗಜಂಗಮದ ಅರ್ಚನೆ ಪೂಜೆಯ ಮಾಡಿ ಕಿಂಕರ್ವಾಣದಿಂದ ಅವರ ಒಕ್ಕುಮಿಕ್ಕ ಪ್ರಸಾದವ ಹಾರೈಸುವುದೆ ಲಿಂಗಾಚಾರ. ಈ ಭೇದವ ತಿಳಿದು ಪಂಚಾಚಾರ ಆಚರಣೆಗೆ ತಂದು, ಸಪ್ತಾಚಾರವ ಸಂಬಂಧವಿಟ್ಟು, ಅಷ್ಟಾವರಣದ ಕಲೆನೆಲೆಗಳ ಒಳಗು-ಹೊರಗು ಎನ್ನದೆ, ಸದ್ಗುರುಮುಖದಿಂದ ಆಚರಣೆ-ಸಂಬಂಧವ ತಿಳಿದು, ಸದ್ಭಕ್ತಿ-ಸಮ್ಯಜ್ಞಾನ-ವೈರಾಗ್ಯ-ಷಟ್ಸ್ಥಲಮಾರ್ಗವ ಹಿಡಿದು, ನಿಜಾಚರಣೆಯಲ್ಲಿ ಆಚರಿಸುವರೆ ಶಿವಶಕ್ತಿ, ಶಿವಭಕ್ತ, ಶಿವಜಂಗಮವಲ್ಲದೆ, ಉಳಿದ ವೇಷಧಾರಿಗಳೆಲ್ಲ ಎನ್ನೊಡೆಯ ಪ್ರಮಥಗಣಾಚಾರಕ್ಕೆ ಹೊರಗೆಂದಾತನಂಬಿಗರ ಚೌಡಯ್ಯನು.