ಎಲೋ ಮಾನವ ಕೇಳೆಲೊ,
ಶೀಲದಲ್ಲಿ ಸಂಪನ್ನರಾದವರು ನೀವು ಕೇಳಿರೊ:
ಹಣ್ಣುಗಳು ಸಣ್ಣ ಜಾತಿಯ ಎಂಜಲು,
ಹಾಲು ಕರುವಿನ ಎಂಜಲು,
ಮೊಸರು ಗೊಲ್ಲತಿಯ ಎಂಜಲು,
ಅಕ್ಕಿ, ಗೋದಿ, ಬೇಳೆ, ಬೆಲ್ಲಗಳು ನೊಣದ ಎಂಜಲು,
ನೀರು ಮೀನು ಕಪ್ಪೆಗಳ ಎಂಜಲು,
ಉಪ್ಪು ಉಪ್ಪಾರನ ಎಂಜಲು,
ಎಣ್ಣೆ ಸರ್ವಮಾನವರ ಎಂಜಲು,
ಸಕಲಪದಾರ್ಥವು ಅನಂತ ಹುಳುಗಳ ಎಂಜಲು.
ಇಂತಹ ಎಂಜಲವು ಎಂದು ಕಣ್ಣಾರೆ ನೋಡಿ, ಕಿವಿಯಾರೆ ಕೇಳಿ,
ಮಾಡುವ ದುರಾಚಾರವ ಆರು ಬಣ್ಣಿಸಬಹುದು?
ಅರಿವು ಇಲ್ಲದವರು ಅರಮನೆಗೆ ಮಾಡಿದರು,
ಭಕ್ತಿಯಿಲ್ಲದವರು ತಮ್ಮ ಗುರುಲಿಂಗಜಂಗಮಕ್ಕೆ ಮಾಡಿದರು.
ಇಂತಪ್ಪ ಸರ್ವರ ಎಂಜಲು ತಿಂದು
ಶಿವಲಿಂಗವ ಧರಿಸಿಕೊಂಡು, ಶಿವಭಕ್ತರೆಂದು ಹೇಳಿಸಿ,
ಕಾಲಿಗೆ ಬಂದಂತೆ ಕುಣಿದು,
ಬಾಯಿಗೆ ಬಂದಂತೆ ಅಂದು,
ಮನಬಂದಂತೆ ಸ್ತ್ರೀಸಂಗದಲ್ಲಿ ಆಚರಿಸುವ
ಭ್ರಷ್ಟ ಹೊಲೆಮಾದಿಗರಿಗೆ ಶೀಲವು ಎಲ್ಲಿಹುದು?
ಆಚರಣೆ ಎಲ್ಲಿಹುದು? ಕುಲವೆಲ್ಲಿಹುದು?
ಇಂತಪ್ಪ ಮೂಳಹೊಲೆಯರ ಮೂಗ ಕೊಯ್ದು
ಪಡಿಹಾರಿ ಉತ್ತಣ್ಣಗಳ ಪಾದುಕದಿ ಹೊಡೆ ಎಂದಾತ
ನಮ್ಮ ಅಂಬಿಗರ ಚೌಡಯ್ಯ.