Index   ವಚನ - 125    Search  
 
ಗುರುವೆಂಬ ಭಾವ ಬ್ರಹ್ಮಮೂರ್ತಿ, ಲಿಂಗವೆಂಬ ಭಾವ ವಿಷ್ಣುಮೂರ್ತಿ, ಜಂಗಮವೆಂಬ ಭಾವ ರುದ್ರಮೂರ್ತಿ. ಅದೆಂತೆಂದಡೆ; ಅನಾದಿವಸ್ತು ರೂಪಾಗಬೇಕಾದ ಕಾರಣ, ಅಹಂ ಬ್ರಹ್ಮವೆಂಬ ಆಕಾರವಿಡಿದು ಬ್ರಹ್ಮಮೂರ್ತಿಯಾದ, ಜ್ಞಾನರುದ್ರ ಪೀಠಸಂಬಂಧಿಯಾದ ಕಾರಣ ವಿಷ್ಣುಮೂರ್ತಿಯಾದ, ಚಿದ್ಘನರುದ್ರ ಚತುರ್ವಿಧಫಲಂಗಳೊಳಗಾದ ಕಾರಣ ಸಂಹಾರರುದ್ರನಾದ. ಸಂಹಾರ ಅಡಗಿ ನಿಂದು, ಉಮಾಪತಿತತ್ವವ ಬಿಟ್ಟು ಸ್ವಯಂಭುಲಿಂಗವಾದ. ಆ ಸ್ವಯಂಭು ಜಂಗಮವೆಂಬಲ್ಲಿ ನಿಂದು ನಿಜವ ಕಂಡಲ್ಲಿ ಲಿಂಗವಾದ. ಲೀಯವಾಗಿ ಕಾಣಲ್ಪಟ್ಟುದ ನಿಲಿಸಿ ಭಾವರಹಿತನಾಗಬೇಕೆಂದನಂಬಿಗರ ಚೌಡಯ್ಯ.