Index   ವಚನ - 174    Search  
 
ಪರಪುರುಷಾರ್ಥವನರಿಯದೆ ಕೆಟ್ಟ ನರಗುರಿಗಳು ನೀವು ಕೇಳಿರೋ: ಪರಪುರುಷಾರ್ಥಕ್ಕೆ ಪ್ರಾಣವ ಕೊಟ್ಟವರುಂಟು. ಮರಳಿ ಕೊಟ್ಟದ್ದಕ್ಕೆ ಕೀರ್ತಿದೇಹವ ಪಡೆದವರ ಪರಿಯ ಕೇಳು ಎಲೇ ಮನವೇ: ಪರಪುರುಷಾರ್ಥಿಯಾದರೆ, ವೀರವಿಕ್ರಮನಂತಾಗಬೇಕು, ಪರಪುರುಷಾರ್ಥಿಯಾದರೆ, ಬಸವಕುಮಾರನಂತಾಗಬೇಕು, ಪರಪುರುಷಾರ್ಥಿಯಾದರೆ, ಕಪೋತಪಕ್ಷಿಯಂತಾಗಬೇಕು, ಇಂತೀ ಪರಪುರುಷಾರ್ಥಕ್ಕೆ ಪ್ರಾಣವ ಕೊಟ್ಟವರುಂಟು. ಹಣವೇನು ದೊಡ್ಡಿತ್ತು? ಹೆಣ್ಣೇನು ದೊಡ್ಡಿತ್ತು? ಮಣ್ಣೇನು ದೊಡ್ಡಿತ್ತು? ಅನ್ನವೇನು ದೊಡ್ಡಿತ್ತು? ಇಂತಿವುಗಳೊಳು ಒಂದನಾದರೂ ಪರಪುರುಷಾರ್ಥಕ್ಕೆ ನೀಡದೆ ಮಾಡದೆ, ತನ್ನ ಶರೀರವ ಹೊರೆದುಕೊಂಡು ಬದುಕುವೆನೆಂಬ ಹೊಲೆ ಮಾದಿಗರುಗಳಿಗೆ ಇಹ-ಪರ ನಾಸ್ತಿ ಎಂದಾತ ನಮ್ಮ ಅಂಬಿಗರ ಚೌಡಯ್ಯ.