Index   ವಚನ - 198    Search  
 
ಭಕ್ತ ಜಂಗಮದ ಪರಿಯ ಹೇಳಿಹೆನು ಕೇಳಿರಣ್ಣಾ: ಭಕ್ತರು ಜಂಗಮವಿದ್ದೆಡೆಗೆ ಹೋಗಿ, ದೀರ್ಘದಂಡ ನಮಸ್ಕಾರವಂ ಮಾಡಿ, ವಿಭೂತಿಯಂ ಕೊಟ್ಟು, ಎಲೆ ದೇವ. ನಿಮ್ಮ ತೊತ್ತುಭೃತ್ಯನೆಂದು ಕಿಂಕುರ್ವಾಣತೆಯಂ ನುಡಿದು, ತೀರ್ಥಪ್ರಸಾದವನಿತ್ತು, ರಕ್ಷಿಸಬೇಕೆಂದು ಬಿನ್ನಪವನಿತ್ತು, ಕೊಂಡು ತನ್ನ ಗೃಹಕ್ಕೆ ಹೋಗಿ ಸಕಲಪದಾರ್ಥಂಗಳು ಆಯಿತ್ತಾದ ಬಳಿಕ ಬಂದು ನಮಸ್ಕಾರವಂ ಮಾಡಿ, ದೇವರಾಯವಾಯಿತ್ತು ಚಿತ್ತೈಸಿಯೆನೆ, ಒಳಿತೆಂದು ಆ ಜಂಗಮವು ಆ ಭಕ್ತನೊಡಗೂಡಿ ಗೃಹಕ್ಕೆ ಬಂದು ಉಲ್ಲಾಸದಿಂ ಆ ಭಕ್ತನು ಪಾದಾರ್ಚನೆಯ ಮಾಡಿ ಅಗ್ರ ಗದ್ದಿಗೆಯನಿಕ್ಕಿ ಮೂರ್ತಮಾಡಿಸಿ ಮರಳಿ ದೀರ್ಘದಂಡನಮಸ್ಕಾರಮಂ ಮಾಡಿ ತೀರ್ಥಪ್ರಸಾದಕ್ಕೆ ನಿರೂಪವೆ ಅಯ್ಯ? ಎಂದು ಎದ್ದು ಬಂದು ಆ ಜಂಗಮಕ್ಕೆ ನಮಸ್ಕರಿಸಿ ದಿವ್ಯಪಾದಮಂ ಪಿಡಿದು,ಸಾಕ್ಷಿ: ದೇಶಿಕಂ ಚರಣಾಂಗುಷ್ಠ[ಭಸಿ]ತಂ ಪ್ರಣಾಮಸ್ತಥಾ ಪಾದಪೂಜಾಮಿಮಾಂ ಕುರ್ಯಾತ್ ಗೋಪ್ಯಂ ಗೋಪ್ಯಂ ವರಾನನೇ ಎಂದು ವಿಭೂತಿಯಂ ಧರಿಸಿ, ಪತ್ರಿಪುಷ್ಪಗಳಿಂದ ಪೂಜೆಯಂ ಮಾಡಿ ತಾಂಬೂಲ ನೆನೆಗಡಲಿ ಮುಖ್ಯವಾದ ಫಲಾಹಾರಂಗಳನರ್ಪಿಸಿ ಪ್ರದಕ್ಷಿಣವಂ ಮಾಡಿ, ಸ್ತುತಿಸಿ, ನಮಸ್ಕರಿಸಿ ಹಸ್ತಪರುಶಮಂ ಮಾಡಿಕೊಂಡು, ಸಕಲಪದಾರ್ಥಂಗ[ಳ] ನೀಡಿ, ವಿಭೂತಿಯಂ ಮುಂದಿಟ್ಟು ನಮಸ್ಕರಿಸಿ ಕರವಂ ಮುಗಿದು ನಿಲ್ಲುವುದು ಭಕ್ತನಿಗೆ ಕರ್ತವ್ಯ. ಇನ್ನು ಜಂಗಮದ ಪರಿಯ ಹೇಳಿಹೆನು ಕೇಳಿರಣ್ಣಾ: ಜಂಗಮವೆ ಪರಾತ್ಪರ, ಜಂಗಮವೆ ಪರವಸ್ತು, ಇಂತಪ್ಪ ಜಂಗಮ ಭಕ್ತನ ಮೇಲಣ ಕರುಣದಿಂ ತೀರ್ಥವನಿತ್ತ ಬಳಿಕ ತಮ್ಮಿಷ್ಟಲಿಂಗ[ಕ್ಕೆ] ಕೊಟ್ಟುಕೊಂಬುದೆ ಜಂಗಮಕ್ಕೆ ಕರ್ತವ್ಯ. ಸಾಕ್ಷಿ: ಜಂಗಮಂ ಪರಾತ್ಪರಂ ಪಾದಾಂಗುಷ್ಠ ತೀರ್ಥಂ ತಥಾ ಸ್ವಯಂ ಲಿಂಗಾರ್ಪಿತ ಪೀತ್ವಾ ಜಂಗಮಃ ಪರಮೇಶ್ವರಃ ಮತ್ತಂ ಸ್ವಪಾದೋದಕ ತೀರ್ಥಾಂ ಚ ಸ್ವಲಿಂಗಸ್ಯ ಸಮರ್ಪ[ಣಂ] ಕೃತ್ವ್ಯಾವಿಭೇದವದ್ಭಕ್ತ್ಯಾ ಅರ್ಪಣೀಯಮನಂತರಂ ಇಂತೆಂಬ ಶುತ್ಯರ್ಥವನರಿಯದೆ ಬೇರೆ ತನಗೊಂದೆಡೆಯೆಂದು ಗೊಣಸೆ ತೆಗೆದುಕೊಂಡು ಎಡೆಮಾಡು ಭಕ್ತಾ ಎಂಬುದು ಜಂಗಮಕ್ಕೆ ಕ್ರಮವೆ? ಅಲ್ಲ. ಅದು ಗಣಸಮೇಳಕ್ಕೆ ಅಲ್ಲದ ಮಾತು. ಆತನ ಮಾತ ಕೇಳಿ ಎಡೆಮಾಡುವಾತ ಭಕ್ತನೆ? ಅಲ್ಲ. ಇವರಿಬ್ಬರ ಮುಖವ ನೋಡಲಾಗದೆಂದನಂಬಿಗರ ಚೌಡಯ್ಯ.