ಮಕ್ಕಳು ಮರಿಗಳು ಸತ್ತು ನಷ್ಟವಾಗಿ,
ಕಷ್ಟ ದುಃಖ ನೆಲೆಗೊಂಡಿತ್ತೆಂದು
ತನ್ನಿಷ್ಟಲಿಂಗಪೂಜೆಯನಗಲಿಸಿ,
ಬಿಟ್ಟಿಯ ಮಾಡಬಹುದೇನಯ್ಯಾ?
ಜಂಗಮವು ಬಂದು ತನ್ನ ವ್ರತ ನೇಮಕ್ಕೆ ಬೇಡಿದಡೆ
ನಿಮ್ಮ ಉಪದ್ರವೇನೆಂದು ಭಕ್ತಿಯ ಮಾಡಬಹುದೇನಯ್ಯಾ?
ಸಕಲದುಃಖಂಗಳು ತಮ್ಮಿಂದ ತಾವೇ ಬರಲರಿಯವು.
ಭಕ್ತಿಯನ್ನು ಮರೆದು, ಮರವೆಯಲ್ಲಿ ಬೆರೆದು,
ಭವಭವದಲ್ಲಿ ಬರುವುದು ಅದೇ ದುಃಖವು,
ನಿಶ್ಚಯವೆಂದಾತ ನಮ್ಮ ಅಂಬಿಗರ ಚೌಡಯ್ಯ.