ಲಿಂಗ ಬಿತ್ತು ಎತ್ತು ಎಂಬಿರಿ,
ಆ ಲಿಂಗ ಬಿದ್ದರೆ ಈ ಭೂಮಿ ತಾಳಬಲ್ಲುದೆ?
ಲಿಂಗವಿರುವುದು ಹರಗುರು ಪಾರಾಯಣ,
ಲಿಂಗವಿರುವುದು ತೆಂಗಿನ ಮರದಲ್ಲಿ,
ಲಿಂಗವಿರುವುದು ಜಂಗಮನ ಅಂಗುಷ್ಠದಲ್ಲಿ,
ಲಿಂಗವಿರುವುದು ಊರ ಹಿರೇ ಬಾಗಿಲಲ್ಲಿ.
ಇಂತಿಪ್ಪ ಲಿಂಗ ಬಿಟ್ಟು, ಸಂತೆಗೆ ಹೋಗಿ
ಮೂರು ಪಾಕಿ ಲಿಂಗವ, ಆರು ಪಾಕಿ ವಸ್ತ್ರವ ತಂದವಂಗೆ,
ಪಾದೋದಕವಿಲ್ಲ, ಪ್ರಸಾದವಿಲ್ಲ, ಮಂತ್ರವಿಲ್ಲ,
ವಿಭೂತಿಯಿಲ್ಲ, ರುದ್ರಾಕ್ಷಿಯಿಲ್ಲ.
ಇಂತಪ್ಪ ಲಿಂಗ ಕಟ್ಟಿದವನೊಬ್ಬ ಕಳ್ಳನಾಯಿ,
ಕಟ್ಟಿಸಿಕೊಂಡವನೊಬ್ಬ ಕಳ್ಳನಾಯಿ.
ಇಂತಪ್ಪ ನಾಯಿಗಳನು ಹಿಡಿತಂದು ಮೂಗನೆ ಕೊಯ್ದು,
ನಮ್ಮ ಕುಂಬಾರ ಗುಂಡಯ್ಯನ ಮನೆಯ
ಕರಿ ಕತ್ತೆಯನು ತಂದು ಊರಲ್ಲೆಲ್ಲ ಮೆರೆಯಿಸಿ
ನಮ್ಮ ಮಾದಾರ ಹರಳಯ್ಯನ ಮನೆಯ
ಹನ್ನೆರಡು ಜೋಡು ಹಳೆಯ ಪಾದರಕ್ಷೆಗಳನು ತಂದು
ಮುದ್ದುಮುಖದ ಮೇಲೆ ಶುದ್ಧವಾಗಿ ಹೊಡೆಯೆಂದಾತ
ನಮ್ಮ ಅಂಬಿಗರ ಚೌಡಯ್ಯ.