ಸತ್ತಡೆ ಸಂಗಡ ಹೊಳಿಸಿಕೊಂಬ ಲಿಂಗವು
ತನ್ನ ಕೊರಳಲ್ಲಿ ಹತ್ತೆಯಾಗಿ ಕಟ್ಟಿರಲು,
ನಾನು ಸತ್ಯಶುದ್ಧಶಿವಭಕ್ತನೆಂದರಿಯದೆ
ಮತ್ತೆ ಅನ್ಯದೈವಕ್ಕೆರಗುವ ಕತ್ತೆಮೂಳರು ನೀವು ಕೇಳಿರೊ!
ಗಂಡನ ಕೂಡೆ ಸಮಾಧಿಯ
ಕೊಂಬ ಹೆಂಡತಿ ಅಪೂರ್ವ!
ಹೆಂಡಿರ ಕೂಡೆ ಸಮಾಧಿಯ
ಕೊಂಬ ಗಂಡರುಂಟೆ ಲೋಕದೊಳು?
ಛೀ ಛೀ ಹಂದಿಮೂಳರಿರ!
ಈ ದೃಷ್ಟವ ಕಂಡಾದರೂ ನಾಚಲಿಲ್ಲವೆ?
ಭವಬಂಧನಂಗಳನಳಿಯಬೇಕೆಂದು ಬಹುದೈವಕ್ಕೆರಗಿದಡೆ,
ಅವು ನಿಮ್ಮ ಸಂಗಡ ಒಂದಾದಡೂ ಹೂಳಿಸಿಕೊಂಬವೆ?
ನೀವು ಗಳಿಸಿದ ಅರ್ಥವನುಂಡುಂಡು,
ನಿಮ್ಮ ಭವದೊಳಗೆ ನೂಂಕಿದ
ಪಿಶಾಚಿಗಳ ನೋಡಿಕೊಂಡು ಪ್ರಮಾಣಿಸಿ,
ಮರಳಿ ಲಿಂಗಭಕ್ತಿಯನರಿಯದೆ,
ಬರಿದೆ ಶಿವಭಕ್ತರೆಂದು ಬೊಗಳುವ ಕುನ್ನಿಗಳು ಪರಿಭವಕ್ಕೆ ಒಳಗಾಗುವರೆಂದಾತನಂಬಿಗರ ಚೌಡಯ್ಯನು.