Index   ವಚನ - 32    Search  
 
ತಪ್ಪಿ ಇಷ್ಟ ನೆಲಕ್ಕೆ ಬಿದ್ದಲ್ಲಿ ದೃಷ್ಟದಿಂದ ತನ್ನ ತಾನೆ ಬಂದುದು ಅದು ಏಕಲಿಂಗನಿಷ್ಠೆ. ವ್ರತಗೆಟ್ಟೆನೆಂಬುದನರಿತು ಆಗವೆ ಪ್ರಾಣವ ಬಿಟ್ಟುದು ವ್ರತನಿಷ್ಠೆವಂತನ ಭಾವ. ಇಂತೀ ಉಭಯಕ್ಕೆ ತಟ್ಟುಮುಟ್ಟಿಲ್ಲ, ಹೀಗಲ್ಲದೆ ಇಷ್ಟವೆಂದೇನು? ವ್ರತಗೆಟ್ಟವನೆಂದೇನು? ಎಂದು ಘಟ್ಟಿಯತನದಲ್ಲಿ ಹೋರುವ ಮಿಟ್ಟೆಯ ಭಂಡಂಗೆ ಮತ್ತೆ ಸತ್ಯ ಸದಾಚಾರ ಭಕ್ತಿ ಉಂಟೆ? ಇಂತಿವರನು ನಾ ಕಂಡು ಗುರುವೆಂದು ವಂದಿಸಿದಡೆ, ಲಿಂಗವೆಂದು ಪೂಜಿಸಿದಡೆ, ಜಂಗಮವೆಂದು ಶರಣೆಂದಡೆ, ಎನಗದೆ ಭಂಗ, ಏಲೇಶ್ವರಲಿಂಗ ತಪ್ಪಿದಡೂ ಹೊರಗೆಂಬೆನು.