Index   ವಚನ - 10    Search  
 
ಬಕಧ್ಯಾನಿ[ಗೆ]ಜಪಧ್ಯಾನ ಉಂಟೆ? ಜೂಜುವೇಂಟೆ ಚದುರಂಗ ನೆತ್ತ ಪಗಡೆ ಪಗುಡಿ ಪರಿಹಾಸಕರ ಕೂಡು ಕೆಲವಂಗೆ ಶಿವಮೂರ್ತಿಧ್ಯಾನ ಉಂಟೆ? ಕುಕ್ಕುರಂಗೆ ಪಟ್ಟೆಮಂಚ ಸುಪ್ಪತ್ತಿಗೆ ಅಮೃತಾನ್ನವನನಿಕ್ಕಿ ಸಲಹಿದಡೂ ಹಡುಹಿಂಗೆ ಚಿತ್ತವನಿಕ್ಕುವುದೇ ದಿಟ. ಇಂತೀ ಜಾತಿಮತ್ತರ ಲಕ್ಷಣಭೇದ. ಇಂತೀ ಗುರುಚರ ಅಜ್ಞಾಪಿಸಿದ ಆಜ್ಞೆಯ ಮೀರಿದವಂಗೆ ಕುಕ್ಕುರನಿಂದತ್ತಳ ಕಡೆ. ಗುರುವಾದಡಾಗಲಿ, ಲಿಂಗವಾದಡಾಗಲಿ, ಚರವಾದಡಾಗಲಿ ವರ್ತನೆ ತಪ್ಪಿ ನಡೆದವಂಗೆ ಭಕ್ತಿವಿರಕ್ತಿ, ಮೋಕ್ಷಮುಮುಕ್ಷತ್ವವಿಲ್ಲ. ಸಂಗನಬಸವಣ್ಣ ಸಾಕ್ಷಿಯಾಗಿ, ಚನ್ನಬಸವಣ್ಣನರಿಕೆಯಾಗಿ, ಪ್ರಭು ಸಿದ್ಧರಾಮೇಶ್ವರ ಮರುಳುಶಂಕರ ನಿಜಗುಣ ಇಂತಿವರೊಳಗಾದ ನಿಜಲಿಂಗಾಂಗಿಗಳು ಮುಂತಾಗಿ ಎನ್ನ ಕಾಯಕಕ್ಕೆ ಸಾರು ಹೋಗೆಂದಿಕ್ಕಿದ ಕಟ್ಟು. ನಾ ಭಕ್ತನೆಂದು ನುಡಿದಡೆ ಎನಗೊಂದು ತಪ್ಪಿಲ್ಲ, ಅದು ನಿಮ್ಮ ಚಿತ್ತದ ಎಚ್ಚರಿಕೆ, ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗ ಸಾಕ್ಷಿಯಾಗಿ.