Index   ವಚನ - 6    Search  
 
ಎನ್ನ ಕಷ್ಟ ಕುಲದಲ್ಲಿ ಹುಟ್ಟಿದೆನೆಂಬ ಕರ್ಮವ ಕಳೆದು ಮುಟ್ಟಿ ಪಾವನವ ಮಾಡಿ ಕೊಟ್ಟನಯ್ಯಾ ಎನ್ನ ಕರಸ್ಥಲಕ್ಕೆ ಲಿಂಗವ! ಆ ಲಿಂಗ ಬಂದು ಸೋಂಕಲೊಡನೆ ಎನ್ನ ಸರ್ವಾಂಗದ ಅವಲೋಹವಳಿಯಿತ್ತಯ್ಯಾ! ಎನ್ನ ತನುವಿನಲ್ಲಿ ಗುರುವ ನೆಲೆಗೊಳಿಸಿದ, ಎನ್ನ ಮನದಲ್ಲಿ ಜಂಗಮವ ನೆಲೆಗೊಳಿಸಿದ, ಎನ್ನ ಅರುಹಿನಲ್ಲಿ ಪ್ರಸಾದವ ನೆಲೆಗೊಳಿಸಿದ! ಇಂತೀ ತ್ರಿವಿಧ ಸ್ಥಾನವ ಶುದ್ಧವ ಮಾಡಿ ಚತುರ್ವಿಧಸಾರಾಯಸ್ಥಲವ ಸಂಬಂಧವ ಮಾಡಿದ ಸಂಗನ ಬಸವಣ್ಣನ ಕರುಣದಿಂದ ಪ್ರಭುದೇವರ ಶ್ರೀಪಾದವ ಕಂಡು ಬದುಕಿದೆನು ಕಾಣಾ! ಅಭಿನವ ಮಲ್ಲಿಕಾರ್ಜುನಾ.