ಎನಗೆ ಅಂಗವೆಂಬುದೊಂದು ಹೆಣ್ಣು.
ಬಾಯಿ ಎಂಬುದು ಭಗ, ಕೈ ಎಂಬುದು ಪುರುಷ.
ಇಕ್ಕಲಾಗಿ ಸಂಸಾರವೆಂಬ ಬಿಂದು ನಿಂದಿತ್ತು.
ಆಸೆಯೆಂಬ ಮಾಸಿನ ಕುಪ್ಪಸದಲ್ಲಿ ಬೆಳೆವುತ್ತಿದೆ.
ನವಮಾಸ ತುಂಬುವನ್ನಕ್ಕ ಕೂಸು ಬಲಿವುದಕ್ಕೆ ಮೊದಲೆ
ಮಾಸ ಹರಿದು ಕೂಸ ಕೊಂದು ಪಾಶವ ಕೆಡಿಸಿ,
ನಿಜತತ್ವದ ಮೂರ್ತಿ ಗುರುವಾಗಿ, ಅದರ ಕಳೆ ಲಿಂಗವಾಗಿ,
ಕೊಟ್ಟ ಲಿಂಗ ಎನ್ನ ಚಿತ್ತದಲ್ಲಿ ನಿಲ್ಲುವುದಲ್ಲದೆ
ಈ ಕೊಟ್ಟಿನ ಕೋಮಳೆ ಕೊಟ್ಟುದ ಎತ್ತಲೆಂದರಿಯೆ
ಆತುರವೈರಿ ಮಾರೇಶ್ವರಾ.