Index   ವಚನ - 7    Search  
 
ಮಹಾ ಅಂಬುಧಿಯಲ್ಲಿ ಹರಿವ ಮತ್ಸ್ಯಕ್ಕೆ ನಾನೊಂದು ಬಗೆಯ ಕಂಡೆ. ಅದು ಅಡಗುವ ಮಡುವ ನೋಡಿ ತ್ರಿವಿಧದ ಸೊಕ್ಕು ತಂದು ಆ ಮಡುವಿನುದಕದಲ್ಲಿ ಒಡಗೂಡಿ ಕದಡೆ ಆ ಸೊಕ್ಕು ಮತ್ಸ್ಯವ ಮುಟ್ಟಿದುದಿಲ್ಲ. ಅದೆಂತೆಂದಡೆ: ಅದರ ನಾಸಿಕದ ಉಸುರು ಸೂಸಲಿಲ್ಲ. ಕಂಗಳ ದೃಷ್ಟಿ ಅನಿರಸಂಗೊಳಲಿಲ್ಲ. ಆ ಮತ್ಸ್ಯದಂಗದ ಕವಚ ದುಸ್ಸಂಗದ ನೀರ ಮುಟ್ಟದಾಗಿ ಅದು ನಿರಂಗದ ಮತ್ಸ್ಯ. ಸುಸಂಗದ ಹೊಳೆಯಲ್ಲಿ ನಿರತಿಶಯದಿಂದ ತಿರುಗುತ್ತದೇಕೊ? ಕದಂಬಲಿಂಗನ ಬಲೆಯ ಹೊಲಬ ಕಂಡು.