Index   ವಚನ - 55    Search  
 
ಭಕ್ತನ ಮಠಕ್ಕೆ ಜಂಗಮ ಬಂದು, ಆ ಭಕ್ತ ಮಾಡಿದಂತೆ ಭಕ್ತಿಯ ಮಾಡಿಸಿಕೊಂಡು, ಕ್ಷಮಿಸಬಲ್ಲಡೆ ಜಂಗಮ; ಆ ಕ್ಷಮೆಯೊಳಗೆ ಮಗ್ನನಾಗಬಲ್ಲಡೆ ಭಕ್ತ. ಉಪಾಧಿಯಾಗಿ ಹೇಳಿ ಮಾಡಿಸಿಕೊಂಬನ್ನಬರ ಭೂತಪ್ರಾಣಿ; ಬಂದ ಪರಿಯಲ್ಲಿ ಪರಿಣಾಮಿಸಬಲ್ಲಡೆ ಲಿಂಗಪ್ರಾಣಿ. ಬೇಡಿದಲ್ಲದೆ ಮಾಡೆನೆಂಬೆನ್ನಕ್ಕರ ಫಲದಾಯಕ; ಬಂದ ಜಂಗಮದ ಇಂಗಿತಾಕಾರವರಿದು ಬೇಡದ ಮುನ್ನವೆ ಮಾಡಬಲ್ಲಡೆ ಭಕ್ತನೆಂಬೆನು; ಬೇಡದ ಮುನ್ನವೆ ಮಾಡುವ ಭಕ್ತನು, ಬೇಡದೆ ಮಾಡಿಸಿಕೊಂಬ ಜಂಗಮವು, ಇಂತೀ ಎರಡರ ಸಮ್ಮೇಳ ಸನ್ನಿಧಿಯಲ್ಲಿರ್ದು ನಾನು ಸುಖಿಯಾದೆನು ಕಾಣಾ ಮಹಾಲಿಂಗ ಗಜೇಶ್ವರಾ.