ಅಪ್ಪು ತುಂಬಿದ ಕುಂಭದಲ್ಲಿ ಕಿಚ್ಚು ಹಾಕಿ
ಕಟ್ಟಿಗೆಯನಿಕ್ಕಿ ಉರುಹಲಿಕ್ಕೆ ಆ ಅಪ್ಪುವ ಸುಟ್ಟುದುಂಟೆ ಕಿಚ್ಚು?
ಆ ಕುಂಭದ ತಪ್ಪಲಿನಲ್ಲಿ ಕಟ್ಟಿಗೆಯನಿಕ್ಕಿ ಉರುಹಲಿಕ್ಕೆ
ಕುಂಭದ ಲೆಪ್ಪದ ಮರೆಯಲ್ಲಿ ಅಪ್ಪುವ ಸುಡಬಲ್ಲುದೆ?
ಇದು ಕಾರಣ ಕ್ರೀಯ ಮರೆಯಲ್ಲಿರ್ದ ನಿಃಕ್ರೀ
ಶಿಲೆಯ ಮರೆಯಲ್ಲಿರ್ದ ನೆಲೆ ವಸ್ತುವ
ಚಿತ್ತದ ಒಲವರದಿಂದ ಅರಿಯಬೇಕು
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವಲ್ಲಿ.