Index   ವಚನ - 34    Search  
 
ಗೃಹಸ್ಥಧರ್ಮದ ಗುರುವಿನ ದೀಕ್ಷಾಚಾರ್ಯನ ಭೇದ ಪಿಂಡೋತ್ಪತ್ಯ ಜಾತಿ ಗೋತ್ರ ಛಾಂದಸ ಭೇದ ಸಲಕ್ಷಣ ನೀತಿ ಭಕ್ತಿ ಸಂಪೂರ್ಣ ಕಳೆಯನರಿತು ಕುಚಿತ್ತ ಕುಹಕ ಕ್ಷುದ್ರ ಪಿಸುಣತ್ವ ಅಸಿಘಾತಕ ಪಾರದ್ವಾರ ಇಂತಿವು ಮುಂತಾದವೆಲ್ಲವ ಸಂತೈಸಿ ಸೋದಿಸಿ ಹದಿನೆಂಟನೆಯ ದೋಷಂಗಳ ವಿಭಾಗಿಸಿ ತೋರಿ ಪಾಪದ ಹೆಚ್ಚುಗೆಯ ಪುಣ್ಯದ ಸನ್ನದ್ಧವಂ ತೋರಿ ಹದಿನೆಂಟು ಸೂತ್ರವಂ ಪ್ರಕರಣಮಂ ಮಾಡಿ ಜಾನು ಜಂಘೆ ಕಟಿ ನಾಭಿ ಹೃದಯಮಧ್ಯ ಕಂಠ ಕರ್ಣ ಜಿಹ್ವೆ ನಾಸಿಕ ನಯನ ಕಪಾಲ ಕರ ಮುಂತಾಗಿ ಪೂರ್ವಾಶ್ರಯಂಗಳಂ ಬಿಡಿಸಿ ಮಾಂಸಪಿಂಡವ ಕಳೆದು ಮಂತ್ರಪಿಂಡವ ಮಾಡುವಲ್ಲಿ ಸ್ಥೂಲದ ವ್ಯವಹರಣೆ ಸೂಕ್ಷ್ಮದ ಪ್ರಕೃತಿ ಕಾರಣದ ಪ್ರಮೇಯವಂ ಕಾಣಿಸಿಕೊಂಡು ರಸ ಗಂಧ ರೂಪು ಶಬ್ದ ಸ್ಪರ್ಶ ಪಂಚೇಂದ್ರಿಯಂಗಳಲ್ಲಿ ಸಂಶಯಮಂ ಪರಿಹರಿಸಿ ಮನ ವಚನ ಕಾಯ ತ್ರಿಕರಣವಂ ಶುದ್ಧಾತ್ಮವಂ ಮಾಡಿ ಈಶ್ವರಧ್ಯಾನದಿಂದ ಕರಕಮಲವಂ ಕಪಾಲದ ಮೇಲೆ ಮೂರ್ತಿಗೊಳಿಸಿ ಧ್ಯಾನ ಪ್ರಯೋಗಮಂ ಕಲ್ಪಿಸಿ ಜ್ಞಾನಪ್ರಯೋಗಮಂ ವೇಧಿಸಿ ಮೇಲೆ ಪ್ರಾಣಲಿಂಗ ಪ್ರತಿಷ್ಠೆಯ ಮಾಡುವಲ್ಲಿ ಅಂಗಕ್ಕೆ ಆಚಾರ ಆತ್ಮಂಗೆ ಅರಿವು ಈ ಗುಣ ಸಂಭವಿಸಿದ ಮೇಲೆ ಹಸ್ತಮಸ್ತಕದ ಸಂಯೋಗವ ಇಷ್ಟತನುವಿಂಗೆ ಇಷ್ಟಲಿಂಗವ ಸಂಬಂಧಿಸಬೇಕು. ಇದು ಚತುರ್ವಿಧಮತದ ಆಚಾರ್ಯನಂಗ, ಗುರುಸ್ಥಲದ ಭಿತ್ತಿ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ ಗುರುದೀಕ್ಷಾಸೂತ್ರ.