Index   ವಚನ - 11    Search  
 
ವೇದ ಶಾಸ್ತ್ರ ಪುರಾಣ ಆಗಮಂಗಳಿಗೆ ಅಭೇದ್ಯಲಿಂಗಕ್ಕೆ ಸಕಲಸಂಸಾರವೇದಿಗಳ ಶೇಷವ ಸಮರ್ಪಿಸಬಹುದೆ? ಅಲ್ಲಾಯೆಂದಡೆ ಸಮಯವಿರೋಧ. ಅಹುದೆಂದಡೆ ಆದಿಯನಾದಿಯಿಂದತ್ತ ಭೇದಿಸಿ ಕಾಣದ ಅಭೇದ್ಯಲಿಂಗಕ್ಕೆ ಸರ್ವಸಾಧನೆಯಲ್ಲಿ ಸಾವವರ ಶೇಷವ ನಾದ ಬಿಂದು ಕಳೆಗೆ ಅತೀತವಪ್ಪ ವಸ್ತುವಿಂಗೆ ನೈವೇದಿಸಬಹುದೆ? ಲಿಂಗದ ಆದ್ಯಂತವನರಿಯರು. ಗುರುಲಿಂಗಜಂಗಮದ ಭೇದಕ್ರೀಯನರಿದು ಕಂಡು ತನ್ನಿರವ ತಾ ಶೋಧಿಸಿಕೊಂಡು ತ್ರಿವಿಧವ ಅರಿತವಂಗಲ್ಲದೆ ಉಭಯಪ್ರಸಾದವ ಲಿಂಗಕ್ಕೆ ಅರ್ಪಿಸಿ ತ್ರಿವಿಧಪ್ರಸಾದವ ಒಡಗೂಡಿಕೊಂಬುದು ನಿರಂಗಿ. ನಿರಂಗಿಯ ಮಹಾಪ್ರಸಾದಿಯ ಅಂಗ ಹೀಂಗಲ್ಲದೆ ಕಂಡವರ ಕೈಕೊಂಡು ಬಂಧ ಮೋಕ್ಷ ಕರ್ಮಂಗಳೊಂದೂ ಹರಿಯದೆ ನಿಂದ ಕೀರ್ತಿ ಆಡಂಬರಕ್ಕಾಗಿ ಮಾಡಿಕೊಂಡ ನೇಮಕ್ಕೆ ಕೆಟ್ಟಡೆ ತ್ರಿವಿಧವೇದಿಗಳು ಬಾಧಿಸಿಹರೆಂದು ಕಟ್ಟುಗುತ್ತಿಗೆಯ ವರ್ತಕರಿಗೆ ತ್ರಿವಿಧಪ್ರಸಾದದ ನಿಜನಿಶ್ಚಯ ಉಂಟೆ? ಇಂತೀ ಭೇದವಿಚಾರಗಳ ತಿಳಿದು ಲಿಂಗದ ಅಂದಿನ ಸೋಂಕಿನಿಂದ ಬಂದ ಗುರು ಲಿಂಗ ಜಂಗಮದ ಅಂಗವನರಿದು ಲಿಂಗಮೂರ್ತಿ ತ್ರಿವಿಧರೂಪಾಗಿ ಬಂದುದ ತಿಳಿದು, ತನ್ನ ಮೂರ್ತಿಗೆ ತಾ ಗುರುವಾಗಿ ದೀಕ್ಷಿತನಾಗಿ ಬಂದುದ ಕಂಡು ತನ್ನ ಮೂರ್ತಿಗೆ ತಾನು ಸುಳಿದು, ಚರವಾಗಿ ನಿಂದುದ ಕಂಡು ತನ್ನ ಮೂರ್ತಿಗೆ ನಿಜಕ್ಕೆ ತಾ ಮೂರ್ತಿಯಾಗಿ ಆ ಲಿಂಗವು ಉಭಯದ ಗುಣದಲ್ಲಿ ಕುರುಹಗೊಂಡಿತ್ತು. ಇಂತೀ ನಡೆನುಡಿ ಸಿದ್ಧಾಂತವಾದವಂಗಲ್ಲದೆ ಗುರುಚರಪ್ರಸಾದ ಲಿಂಗಕ್ಕೆ ನೈವೇದ್ಯವಲ್ಲ, ದಹನ ಚಂಡಿಕೇಶ್ವರಲಿಂಗವನರಿದ ಪ್ರಸಾದಿಯ ನಿರಂಗ.