Index   ವಚನ - 1    Search  
 
ಅರಿವಿಂಗೂ ಮರವೆಯ ದೆಸೆಯಲ್ಲಿ ಓಲಾಡುವ ಇಂದ್ರಿಯಂಗಳ ಸಮೂಹ. ಈ ಉಭಯವೂ ಕೂಡಿ, ಮಹವೊಡಗೂಡಿದಲ್ಲಿ ಭರಿತಾರ್ಪಣ. ಅರಿವುಳ್ಳವನೆಂದು, ನಿಬ್ಬೆರಗು ಕರಿಗೊಂಡವನೆಂದು, ಸರ್ವಸಂಗಪರಿತ್ಯಾಗಿಯೆಂದು ತಾನರಿಯದೆ, ಉಳಿದರ ಕೈಯಿಂದ, ಪರಾಧೀನರಿಗೊರೆಯದೆ, ಅಮೃತ ಸುಧೆಯಂತೆ, ಪರಿಪೂರ್ಣ ಕಳೆ[ಯ]ಂತೆ, ಅರಿದರಿಯದಂತಿದ್ದುದು ಭರಿತಾರ್ಪಣ. ಹೀಂಗಲ್ಲದೆ ಅಜಯಾಗವ ಮಾಡುವ ವಿಪ್ರನ ಕರ್ಮದಂತೆ ನಾನಲ್ಲ ನೇಣು ಕೊಂದಿತ್ತೆಂದು ದಾಯಗಾರಿಕೆಯಲ್ಲಿ ಹೋಹ ದರ್ಶನ ಢಾಳಕವಂತಂಗೆ, ತನ್ನ ಕಾಲ ವೇಳೆಗೆ ತಕ್ಕಹಾಗೆ ಭಕ್ತಿಯ ಮರೆದು, ಸತ್ಯವ ತೊರೆದ ದುರ್ಮತ್ತಂಗೆ ಭರಿತಾರ್ಪಣದ ಕಟ್ಟುಂಟೆ ? ಇಂತೀ ಭೇದಂಗಳ ಯುಕ್ತಿಯಲ್ಲಿ ಸತ್ತು ಚಿತ್ತು ಆನಂದವೆಂಬ ಗೊತ್ತ ಮುಟ್ಟದೆ, ಮನ ಘನದಲ್ಲಿ ನಿಂದು ಉಭಯದೆಡೆಗೆಟ್ಟುದು ಭರಿತಾರ್ಪಣ. ಈ ಗುಣ ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗ.