Index   ವಚನ - 4    Search  
 
ಒಮ್ಮೆಗೆ ಸುರಿದು, ಮತ್ತೊಮ್ಮೆಗೆ ಬೇಡದಿಪ್ಪುದೆ ಭರಿತಾರ್ಪಣವೆ ? ಮುಟ್ಟಿ ಮುಟ್ಟಿ ಅರ್ಪಿಸಲಾರದೆ ಗುಪ್ಪೆಯಾಗಿ ಸುರಿಯಿಸಿ ಕೊಂಡು ಕೊಂಬುದು ಇದು ಕೃತ್ಯದ ನೇಮ, ಭರಿತಾರ್ಪಣವೆ ? ಭರಿತಾರ್ಪಣವಾವುದೆಂದಡೆ : ಪರಸ್ತ್ರೀ ಒಲಿದು ಬಂದಲ್ಲಿ, ನೇಮಕಲ್ಲದ ದ್ರವ್ಯನೆರೆದು, ನಿಕ್ಷೇಪ ಕೈಲೆಡೆಯ ಕಡವರ ವಿಶ್ವಾಸಿಸಿದಲ್ಲಿ, ಘಾತಕತನವ ಬಿಟ್ಟು ಇಂತೀ ಅವಗುಣದಲ್ಲಿ ಮಲಿನನಲ್ಲದೆ ಸ್ವಾನುಭಾವಸಿದ್ಧನಾಗಿ ಕಾಯಕರ್ಮಕ್ಕೊಳಗಲ್ಲದೆ, ಜೀವ ನಾನಾ ಜೀವಂಗಳಲ್ಲಿ ಹುಟ್ಟಿ ಹೊಂದದೆ, ಆತ್ಮನ ವಸ್ತುವಲ್ಲದೆ ಮತ್ತೇನನೂ ಅರಿಯದೆ, ಪರಿಭ್ರಮವ ಹರಿದುದು ಭರಿತಾರ್ಪಣ. ಈ ಗುಣ ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗ.