Index   ವಚನ - 8    Search  
 
ತಾನರಿಯದುದನರಿದಾಗವೆ ಭರಿತಾರ್ಪಣ. ತಾ ಕೆಡಿಸಿದುದ ಕಂಡಲ್ಲಿಯೆ ಭರಿತಾರ್ಪಣ. ತ್ರಿವಿಧಮಲದಿಂದ ಕಟ್ಟೊತ್ತರ ಬಂದಲ್ಲಿ ತೊಟ್ಟು ಬಿಟ್ಟ ಹಣ್ಣಿನಂತಿದ್ದಾಗವೆ ಭರಿತಾರ್ಪಣ. ತಾ ಹೇಳಿದ ವ್ರತ ನೇಮ ನಿತ್ಯ ಕೃತ್ಯಂಗಳಲ್ಲಿ ಅನುಸರಣೆಯಿಂದ ತನು ಸೋಂಕಿದಾಗವೆ ಭರಿತಾರ್ಪಣ. ಪಡಿಪುಚ್ಚವಿಲ್ಲದ ನುಡಿಗೆಡೆಯಾಗದೆ ಲಿಂಗದಲ್ಲಿ ಒಡಗೂಡೂದೆ ಭರಿತಾರ್ಪಣ. ಇದು ಕ್ಷುತ್ತಿನ ಆಗಲ್ಲ, ಸಂಸಾರಘಟವ ಮೆತ್ತುವ ಬುತ್ತಿಯಲ್ಲ. ನಿತ್ಯಾನಿತ್ಯವ ತಿಳಿದು, ನಿಶ್ಚಯವನರಿದಲ್ಲಿ ಭರಿತಾರ್ಪಣ. ಇದು ಸತ್ಯವಂತರ ಹೊಲ, ಮುಕ್ತಿವಂತರ ಬೆಳೆ. ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗದ ಸಂಗ.