Index   ವಚನ - 12    Search  
 
ಜಗದಗಲದ ಗದ್ಗುಗೆಗಳಿಗೆ ಅಪ್ರಮಾಣದ ಲಿಂಗಪ್ರತಿಷ್ಠೆಯ ಮಾಡಿದರು ನೋಡಾ. ಅದಕ್ಕೆ ತೊಂಬತ್ತಾರಂಗುಲ ಪ್ರಮಾಣಿನ ದೇಗುಲ ನೋಡಾ. ನಾಲ್ಕೈದು ಬಾಗಿಲು ನೋಡಾ. ಬೇರೊಂದು ಬಾಗಿಲು ಮುಚ್ಚಿ ಮುಸುಕಿಹುದು. ದಶಮದ್ವಾರವ ನೆರೆಹೆವೆಂದು ಬಾಗಿಲ ಮುಚ್ಚಹೋದಡೆ ತೆಗೆವವು. ತೆಗೆಯಹೋದಡೆ ಮುಚ್ಚುವವು ನೋಡಾ. ಈ ವರ್ಮಸಕೀಲವನರಿಯದೆ ಅತಿರಥರು ಮಹಾರಥರು ತೊಳಲಿ ಬಳಲುತೈದಾರೆ. ವೀರಧೀರಸುಭಟರುಗಳೆಲ್ಲಾ ಹೇಡಿ ಬಳೆಯಂ ತೊಟ್ಟು ಹೆಣ್ಣಾಗಿ ಹೋದರು. ಅರುಹಿರಿಯರೆಲ್ಲಾ ಮರುಳಾಗಿ ಮತಿಗೆಟ್ಟು ಹೋದರು. ಇದನಾರಯ್ಯಾ ಬಲ್ಲವರು ? ನೀವಿಕ್ಕಿದ ಕದವ ತೆಗೆಯಬಲ್ಲವರಾರೊ ಅಯ್ಯಾ ! ತೆಗೆಯದ ಕದವನಿಕ್ಕಬಲ್ಲವರಾರೊ ಅಯ್ಯಾ ! ಪದಪಂಕದಲ್ಲಿನ ದ್ವಾರಮಂ ಕಾಯ್ದಿಪ್ಪ ದಿಟ್ಟಿಯ ಕಡೆಗಣ್ಣಿನ ಬೆಳಗಿನೊಳಗಾಡುವ ಅವ್ಯಯ ಹರಿಬ್ರಹ್ಮಾದಿಗಳು ಮೊದಲಾದ ಸಚರಾಚರದವರನೆಲ್ಲ ನುಂಗಿತ್ತು ನೋಡಾ. ಇದನಾರಿಗೂ ಅರಿಯಬಾರದು ನೋಡಾ. ನೀವಿದ್ದಲ್ಲಿ ಇಲ್ಲದಿಪ್ಪ ಶರಣರಿಗಲ್ಲದೆ ಇದರ ಭೇದವ ಬಲ್ಲವ ಅಲ್ಲಮನು. ಕಾಮನ ಕಣ್ಣಿಗೆ ಮುಳ್ಳಬೆಟ್ಟದೊಡನೆ ಮುಟ್ಟದ ಕದವು ತೆಗೆದವು. ತೆಗೆದಿದ್ದ ಬಾಗಿಲು ತಮತಮಗೆ ಮುಚ್ಚಿದವು ನೋಡಾ. ಹೂಗಲ್ಲಿಗೆ ಕಿಚ್ಚನಿಕ್ಕಿ ಆ ಬಾಗಿಲ ಕಾಯ್ದಿಪ್ಪವಳ ಮೂಗ ಮೊಲೆಯ ಕೊಯ್ದು, ಸಾಗರದ ಕಟ್ಟೆಯ ಒಡೆದು, ದಶಮ ದ್ವಾರದಲ್ಲಿ ನಿಂದು, ನಿಮ್ಮ ಹೊತ್ತಿರ್ಪವಳ ನೆತ್ತಿಗಣ್ಣಿಂದ ತೆಗೆದು ನೋಡಿ, ಏಕಾದಶದ್ವಾರದ ಸೂತ್ರ ಸೂಕ್ಷ್ಮವಿನ್ನು ಮಹಾಬೆಳಗಿನೊಳಗೆ ಸಾಸಿವೆಯ ಛಿದ್ರವ ಮಾಡಿ ಕುಂಬಳದ ಕಾಯ ಕೀಲಕೊಟ್ಟಂತೆಯಿಪ್ಪ ನಿಜಗುರು ಭೋಗೇಶ್ವರ ನಿಮ್ಮ ಇರವು, ಪ್ರಭುವಿನ ಕರುಣವುಳ್ಳ ಲಿಂಗಾಂಗಿಗಳಿಗಲ್ಲದೆ ವಾಗದ್ವೈತದಿಂದ ಒಡಲ ಹೊರೆವ ಬಹುಭಾಷಿಗಳಿಗೆಂತು ಸಾಧ್ಯವಪ್ಪುದೊ ?