Index   ವಚನ - 22    Search  
 
ಹಾಲು ಅನಿಲ ಕಂದಮೂಲ ಪರ್ಣಾಂಬು ಫಲಾದಿಗಳನೆ ಆಹಾರವ ಕೊಂಡು ಮುಕ್ತರಾದೆಹೆವೆಂಬ ಅಣ್ಣಗಳು ನೀವು ಕೇಳಿರೆ. ಆಹಾರವ ಕೊಂಡು ಅಣುರೇಣು ನೊರಜ ಸರ್ವ ಸರ್ಪ ಪಕ್ಷಿಗಳು ವಾಯುವನೇ ಉಂಡು ಬೆಳೆದವು ನೋಡಾ. ಖಗ ಮೃಗ ವಾನರ ಕ್ರಿಮಿ ಕೀಟಕ ಇವೆಲ್ಲವೂ ಕಂದಮೂಲ ಪರ್ಣಾಂಬುವನೆ ಉಂಡು ಬೆಳೆವವು ಕೇಳಿರಣ್ಣಾ. ಕ್ಷೀರಾಬ್ಧಿಯೊಳಗೆ ಹುಟ್ಟಿದ ಪ್ರಾಣಿಗಳೆಲ್ಲ ಕ್ಷೀರವನೆ ಉಂಡು ಬೆಳೆವವು. ನಿಮಗೆ ಮುಕ್ತಿಯುಂಟಾದಡೆ ಇವು ಮಾಡಿದ ಪಾಪವೇನು ಹೇಳಿರೇ ? ವಿಚಾರಿಸುವಡೆ ನಿಮ್ಮಿಂದ ಅವೆ ಹಿರಿಯರು ನೋಡಾ. ವಾಗದ್ವೈತವ ನುಡಿದು ಅನುವನರಿಯದೆ ಬರುಸೂರೆವೋದಿರಲ್ಲಾ. ಆದಿ ಅನಾದಿಯ ಅಂಗವ ಮಾಡಿ, ಆ ಮಹಾ ಅನಾದಿಯ ಪ್ರಕಾಶವನೆ ಶ್ರೀಗುರು ಸಾಕಾರಮೂರ್ತಿಯಂ ಮಾಡಿ, ಅಂಗ ಮನ ಪ್ರಾಣ ಸರ್ವಾಂಗದಲ್ಲಿ ನೆಲೆಗೊಳಿಸಿದ ಭೇದವನರಿತು, ಶ್ರೋತ್ರ ನೇತ್ರ ಘ್ರಾಣ ತ್ವಕ್ಕು ಜಿಹ್ವೆ ಮೊದಲಾದ ಸರ್ವೇಂದ್ರಿಯದಲ್ಲಿ ವೇಧಿಸಿಕೊಂಡು, ಶುದ್ಧ ಸುಯಿದಾನ ಸುಜ್ಞಾನದಿಂದ ಲಿಂಗಾವಧಾನ ಹಿಡಿದು ಅರ್ಪಿಸಿ, ಆ ಪರಮ ಪ್ರಸಾದವನುಂಡು, ಮಾತಂಗ ನುಂಗಿದ ನಾರಿವಾಳದ ಫಲದಂತೆ ಬಯಲುಂಡ ಪರಿಮಳದಂತೆ ನಿಜಗುರು ಭೋಗಸಂಗನೊಳು ಸಯವಾದ ಶರಣರಿರವು, ಮಿಕ್ಕಿನ ಭವಭಾರಿಗಳಿಗೆಂತು ಸಾಧ್ಯವಪ್ಪುದೊ, ಕೇಳಯ್ಯಾ.