Index   ವಚನ - 68    Search  
 
ಇಂದ್ರಲೋಕದವರೆಲ್ಲರೂ ಸಹೀಂದ್ರನಾಥ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ. ಬ್ರಹ್ಮಲೋಕದವರೆಲ್ಲರೂ ಪರಬ್ರಹ್ಮ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ. ವಿಷ್ಣುಲೋಕದವರೆಲ್ಲರೂ ಮಹಾದಂಡನಾಥ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ. ರುದ್ರಲೋಕದವರೆಲ್ಲರೂ ಮಹಾರುದ್ರ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ. ಶಿವಲೋಕದವರೆಲ್ಲರೂ ಪರಶಿವ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ. ಪ್ರಮಥಮಲೋಕದವರೆಲ್ಲರೂ ಪ್ರಮಥನಾಥ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ. ಪರಲೋಕದವರೆಲ್ಲರೂ ಪರಾಪರ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ. ಸತ್ಯಲೋಕದವರೆಲ್ಲರೂ ನಿತ್ಯ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ. ಮರ್ತ್ಯಲೋಕದವರೆಲ್ಲರೂ ಕರ್ತ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ. ನಾಗಲೋಕದವರೆಲ್ಲರೂ ನಾಗನಾಥ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ. ಪಾತಾಳಲೋಕದವರೆಲ್ಲರೂ ಅಪ್ರಮಾಣ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ. ರಸಾತಳಲೋಕದವರೆಲ್ಲರೂ ಮಹಾಮಹಿಮ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ. ಶೂನ್ಯಲೋಕದವರೆಲ್ಲರೂ ಶೂನ್ಯಲಿಂಗ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ. ಸರ್ವಲೋಕದವರೆಲ್ಲರೂ ಸರ್ವಾಧಾರ ಬಸವಣ್ಣ ಎಂದು ಹೊಗಳುತಿರ್ಪರಯ್ಯಾ. ಇಂತು, ನಿತ್ಯರು ನಿಜೈಕ್ಯರು ಬಸವಣ್ಣನ ನೆನೆಯದವರಾರು ? ಸತ್ಯರು ಸದ್ಯೋನ್ಮುಕ್ತರು ಬಸವಣ್ಣನ ಹೊಗಳದವರಾರು ? ಸರ್ವಮಹಿಮನೆ, ಸರ್ವಘನಮನವೇದ್ಯನೆ, ಸರ್ವಪರಿಪೂರ್ಣನೆ ಕಲಿದೇವಾ,ನಿಮ್ಮ ಶರಣ ಬಸವಣ್ಣನಿಂತಹ ಘನಮಹಿಮ ನೋಡಯ್ಯಾ.