Index   ವಚನ - 654    Search  
 
ಕಾಲಚಕ್ರದ ವಚನ: ಏಕಂ ಏಕವಾದ ವಸ್ತುವ ಲೋಕಾ ಲೋಕಂಗಳರಿಯವು. ಸ್ಥೂಲ ಸೂಕ್ಷ್ಮವೆನುತಿರ್ಪರೆಲ್ಲರೂ, ಆತನೀತ ಬೇರೆ ಮತ್ತೊಬ್ಬಾತನೆಂಬ ಭ್ರಮೆಯಲ್ಲಿ ಭೂತ ಪ್ರಾಣಿಗಳವರೆತ್ತ ಬಲ್ಲರು ಆತನ ಘನವ? ಚಿಟುಕು ಮುನ್ನೂರರವತ್ತು ಕೂಡಿದಡೆ ಒಂದು ವಿಘಳಿಗೆ, ಆ ವಿಘಳಿಗೆ ಅರುವತ್ತು ಕೂಡಿದೊಡೆ ಒಂದು ಘಳಿಗೆ, ಆ ಘಳಿಗೆ ಅರುವತ್ತು ಕೂಡಿದೊಡೆ ಒಂದು ದಿನ. ದಿನ ಮೂವತ್ತು ಕೂಡಿದೊಡೆ ಒಂದು ಮಾಸ. ಮಾಸ ಹನ್ನೆರಡು ಕೂಡಿದೊಡೆ ಒಂದು ವರುಷ. ವರುಷ ಅರುವತ್ತು ಕೂಡಿದೊಡೆ ಒಂದು ಸಂವತ್ಸರ ಇಂತೀ ಕಾಲಚಕ್ರಂಗಳು ಈ ಪರಿಧಿಯಲ್ಲಿ ತಿರುಗಿ ಬರುತ್ತಿಹವು ಕಾಣಿರೆ. ನಾಲ್ಕು ಯುಗಂಗಳು ಬೇರೆ ಬೇರೆ ಕಟ್ಟಿದ ಕಟ್ಟಳೆಯೊಳು, ತಿರುಗಿ ಬರುತ್ತಿಹವು ಕಾಣಿರೆ. ಕೃತಯುಗ ಹದಿನೇಳು ಲಕ್ಷವು ಇಪ್ಪತ್ತೆಂಟು ಸಾವಿರವರ್ಷ ವರ್ತಿಸಿ ನಿಂದಿತ್ತು. ತ್ರೇತಾಯುಗ ಹನ್ನೆರಡು ಲಕ್ಷವು ತೊಂಬತ್ತಾರು ಸಾವಿರ ವರ್ಷ ವರ್ತಿಸಿ ನಿಂದಿತ್ತು. ದ್ವಾಪರಯುಗ ಎಂಟು ಲಕ್ಷವು ಅರುವತ್ತುನಾಲ್ಕು ಸಾವಿರ ವರ್ಷ ವರ್ತಿಸಿ ನಿಂದಿತ್ತು. ಕಲಿಯುಗ ನಾಲ್ಕುಲಕ್ಷವು ಮೂವತ್ತೆರಡು ಸಾವಿರ ವರ್ಷ ವರ್ತಿಸಿ ನಿಂದಿತ್ತು. ಇಂತೀ ನಾಲ್ಕು ಯುಗಂಗಳು ಕೂಡಿ ಒಂದಾಗಿ ಮೇಳಯಿಸಿದೊಡೆ, ನಾಲ್ವತ್ತು ಮೂರು ಲಕ್ಷವು ಇಪ್ಪತ್ತು ಸಾವಿರ ವರುಷ ಕಟ್ಟಳೆಯಾಯಿತ್ತು. ಈ ನಾಲ್ಕುಯುಗಂಗಳು ಇಪ್ಪತ್ತೊಂದು ಬಾರಿ ತಿರುಗಿದಡೆ ಸುರಪತಿಗೆ ಪರಮಾಯು, ಬ್ರಹ್ಮಂಗೆ ಜಾವ, ಅಷ್ಟಾಶಿತಿ ಸಹಸ್ರ ಋಷಿಯರು ಸಾವಿರಬಾರಿ ತಿರುಗಿದಡೆ ಬ್ರಹ್ಮಂಗೆ ಆಯುಷ್ಯ ನೂರಪ್ಪುದು, ವಿಷ್ಣುವಿಂಗೆ ಜಾವವಪ್ಪುದು. ಅಂಥ ವಿಷ್ಣುವಿನ ಒಂದು ದಿನದಲ್ಲಿ ಸಮಸ್ತ ಈರೇಳು ಭುವನಂಗಳೆಲ್ಲ ಭೂತ ಸಂಹಾರ, ಅಂಥ ಭೂತ ಸಂಹಾರಗಳು ಹದಿನೆಂಟು ಲಕ್ಷವು ಇಪ್ಪತ್ತೆಂಟು ಸಹಸ್ರ ವರುಷ ತಿರುಗಲು ಪೃಥ್ವಿಯಲ್ಲಾ ಜಲಪ್ರಳಯ. ಅಂಥಾ ಜಲಪ್ರಳಯವೆಂಟು ಬಾರಿ ತಿರುಗಿದಡೆ ವಿಷ್ಣುವಿಂಗೆ ಮರಣ, ರುದ್ರಂಗೆ ನಿಮಿಷ. ಅಂಥಾ ರುದ್ರನ ಒಂದು ನಿಮಿಷದಲ್ಲಿ ಅತಳ ವಿತಳ ಸುತಳ ಮಹೀತಳ ರಸಾತಳ ತಳಾತಳ ಪಾತಾಳ ಇಂತು ಕೆಳಗೇಳು ಭುವನಂಗಳು, ಮೇಲೆ, ಸತ್ಯಲೋಕ ಜನರ್ಲೋಕ ತಪೋಲೋಕ ಮಹರ್ಲೋಕ, ಸ್ವರ್ಲೋಕ ಭೂವರ್ಲೋಕ ಭೂಲೋಕ ಮೊದಲಾಗಿ ಇಂತೀ ಲೋಕಾಲೋಕಂಗಳೆಲ್ಲ ಮುಳುಗಿ ಮಹಾಪ್ರಳಯವಾದಲ್ಲಿ ರುದ್ರ ಲೋಕವೊಂದುಳಿಯೆ, ಆ ರುದ್ರಂಗೆ ಒಂದುದಿನ. ಅಂಥಾ ದಿನ ಮುನ್ನೂರರವತ್ತು ಕೂಡಿದಡೆ ಒಂದು ವರುಷ. ಅಂಥಾ ವರುಷ ಶತಕೋಟಿ ಕೂಡಿದಡೆ ರುದ್ರಂಗೆ ಪರಮಾಯು. ಅಂಥಾ ರುದ್ರರು ಅನೇಕರು ಹೋದರಲ್ಲಾ, ಮತ್ತಂ ಪಶುಪತಿ, ಶಂಕರ, ಶಶಿಧರ, ಸದಾಶಿವ, ಗೌರೀಪತಿ, ಮಹಾದೇವ ಈಶ್ವರರೆಂಬವರು ಆ ದಿನದಲ್ಲಿ ಇವರು ಪ್ರಮಥ ಗಣೇಶ್ವರರು, ತಪೋ ರಾಜ್ಯವನುಂಬರು. ತಪಕ್ಕೆ ಬಿಜಯಂಗೈವರು ಆ ರುದ್ರರು. ಲೋಕಾಲೋಕಂಗಳು ಕೂಡಿ ಭೂತ ವರ್ತಿಸುತ್ತಿದ್ದಿತ್ತೊಂದು ಕೆಲವು ಕಾಲ, ಅದು ತೊಡೆದು ಹೋಯಿತ್ತು. ಬಳಿಕ ಶೂನ್ಯವರ್ತಿಸುತ್ತಿದ್ದಿತ್ತೊಂದು ಕೆಲವು ಕಾಲ, ಅದು ತೊಡೆದು ಹೋಯಿತ್ತು ಬಳಿಕ ಕಾಳಾಂಧರ ವರ್ತಿಸುತ್ತಿದ್ದಿತ್ತೊಂದು ಕೆಲವು ಕಾಲ, ಅದು ತೊಡೆದು ಹೋಯಿತ್ತು ಬಳಿಕ ಮಹಾ ಪ್ರಕಾಶದ ಬೆಳಗು. ಇಂತಹ ಕಾಲಂಗಳು ಈ ಪರಿಯಲ್ಲಿ ತಿರುಗಿ ಬರುತ್ತಿಹವು ಕಾಣಿರೆ! ಅಂತಹ ಕಾಲಂಗಳೂ ಅರಿಯವು, ಅಂತಹ ದಿನಂಗಳೂ ಅರಿಯವು ಅಂತಹ ದೇವತೆಗಳೂ ಅರಿಯರು, ಅಪ್ರಮಾಣ ಅಗಮ್ಯ ಅಗೋಚರ ಉಪಮಿಸಬಾರದು. ಅಂತಿಂತೆನಲಿಲ್ಲ ಗುಹೇಶ್ವರಲಿಂಗ ನಿರಂಜನ ನಿರಾಳ! ನಿರಾಮಯ!