ಎನ್ನ ಅಷ್ಟವಿಧಾರ್ಚನೆ ಶುದ್ಧವಾಯಿತ್ತಯ್ಯಾ
ನೀವು ಮೂರ್ತಿಲಿಂಗವಾದ ಕಾರಣ.
ಎನ್ನ ತನು ಮನ ಶುದ್ಧವಾಯಿತ್ತಯ್ಯಾ
ನೀವು ಜಂಗಮಲಿಂಗವಾದ ಕಾರಣ.
ಎನ್ನ ಆಪ್ಯಾಯನ ಶುದ್ಧವಾಯಿತ್ತಯ್ಯಾ
ನಿಮ್ಮ ಪ್ರಸಾದವ ಕೊಂಡೆನಾಗಿ.
ಎನ್ನ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಂಗಳೆಲ್ಲಾ
ಶುದ್ಧವಾದವಯ್ಯಾ ನೀವು ಜ್ಞಾನಲಿಂಗವಾದ ಕಾರಣ.
ಇಂತೀ ಎನ್ನ ಸರ್ವದಲ್ಲಿ ಸನ್ನಹಿತವಾದೆಯಲ್ಲಾ
ಕಲಿದೇವರದೇವ.