Index   ವಚನ - 102    Search  
 
ಎಲೆ ಕಲಿದೇವಯ್ಯಾ, ಆದಿಯ ಕುಳವೂ ಅನಾದಿಯ ಕುಳವೂ ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು. ಮೂಲಶುದ್ಧದ ಮುಕ್ತಾಯ ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು. ಉಭಯಕುಳದ ಕಿರಣಶಕ್ತಿ ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು. ಭಾವವೂ ನಿರ್ಭಾವವೂ ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು. ಅರ್ಥ ಪ್ರಾಣ ಅಭಿಮಾನ ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು. ಅಂಗಲಿಂಗಸಂಗ ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು. ಅಷ್ಟದಳಕಮಲದ ಸಪ್ತಕರ್ಣಿಕೆಯು ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು. ಎನ್ನ ನಡೆಗೆಟ್ಟಿತ್ತು ನಿಮ್ಮ ಜಂಗಮಮೂರ್ತಿಯಿಂದ. ಎನ್ನ ನುಡಿಗೆಟ್ಟಿತ್ತು ನಿಮ್ಮ ಜಂಗಮಮೂರ್ತಿಯಿಂದ ಎನ್ನ ನೋಟ ಕೆಟ್ಟಿತ್ತು ನಿಮ್ಮ ಜಂಗಮಮೂರ್ತಿಯಿಂದ. ಎನ್ನ ಮಾಟ ಸಮಾಪ್ತಿಯಾಯಿತ್ತು ನಿಮ್ಮ ಜಂಗಮಮೂರ್ತಿಯಿಂದ. ನಿಮ್ಮ ಪ್ರಸಾದದಿಂದ ತನು ಶುದ್ಧವಾಯಿತ್ತು. ಬಸವಣ್ಣ ತೋರಿದ ಕಾರಣ, ನಿಮ್ಮ ಜಂಗಮಮೂರ್ತಿಯ ಕಂಡು ಬದುಕಿದೆನು ಕಾಣಾ ಕಲಿದೇವರದೇವಾ.