Index   ವಚನ - 110    Search  
 
ಕಡಲುಗಳ ಕ[ರ]ಗಳೊಳಗೆ ಮೊಗೆದು ಬರಿಕೆಯ್ವುತಿಹರು ಕೆಲರು ಗಣೇಶ್ವರರು. ಮೇರುಗಿರಿಗಳ ಮಿಡಿದು ಮೀಟುತ್ತಿಹರು ಕೆಲರು ಗಣೇಶ್ವರರು. ಸಕಲಬ್ರಹ್ಮಾಂಡಗಳ ಹಿಡಿದು ಹಿಸುಕಿ ಕೆಡಹುತ್ತಿಹರು ಕೆಲರು ಗಣೇಶ್ವರರು. ಅಗ್ನಿ ವಾಯುಗಳ ಹಿಡಿದು ಹೊಸೆದುಹಾಕುತ್ತಿಹರು ಕೆಲರು ಗಣೇಶ್ವರರು. ರವಿ ಶಶಿಗಳನು ಧ್ರುವಮಂಡಲಂಗಳನು ಪೂರಕದಲ್ಲಿ ತೆಗೆತಂದು, ರೇಚಕದಲ್ಲಿ ಬಿಡುತ್ತಿಹರು ಕೆಲರು ಗಣೇಶ್ವರರು. ಬಯಲನಾಕಾರವ ಮಾಡಿ, ಆಕಾರವ ಬಯಲ ಮಾಡುತ್ತಿಹರು ಕೆಲರು ಗಣೇಶ್ವರರು. ಇಂತಿವರೆಲ್ಲರೂ ಕಲಿದೇವರದೇವಾ ನಿಮ್ಮ ಬಸವಣ್ಣನ ನಿರಾಧಾರಪಥದಲ್ಲಿ ನಿಂದಿರ್ಪರು.