Index   ವಚನ - 143    Search  
 
ಗುರುಕರಜಾತರಾಗಿ ಅಂಗದ ಮೇಲೆ ಲಿಂಗಸಾಹಿತ್ಯವಾದ ಸದ್ಭಕ್ತಂಗೆ, ಆ ಲಿಂಗವೆ ಪತಿ, ತಾನೆ ಸತಿಯಾಗಿರಲು ತನಗೆ ಬೇರೆ ಸತಿಯುಂಟೆ? ಗುರುಕರದಲ್ಲಿ ಉದಯವಾಗಿ, ಅಂಗದ ಮೇಲೆ ಲಿಂಗವ ಧರಿಸಿದ ಲಿಂಗಾಂಗನೆಗೆ, ಆ ಲಿಂಗವೆ ಪತಿ, ತಾನೆ ಸತಿಯಾಗಿರಲು ಆಕೆಗೆ ಬೇರೆ ಪತಿಯುಂಟೆ? ಇದು ಕಾರಣ, ಲಿಂಗವೆ ಪತಿ, ತಾವಿಬ್ಬರೂ ಭಕ್ತಿಸತಿಗಳಾಗಿ, ಲಿಂಗಸೇವೆಯ ಮಾಡಿ, ಜಂಗಮದಾಸೋಹಿಗಳಾಗಿ, ಲಿಂಗಜಂಗಮಪ್ರಸಾದಸುಖಿಗಳಾಗಿರಿಯೆಂದು ಶ್ರೀಗುರು ವಿಭೂತಿಯ ಪಟ್ಟವಂ ಕಟ್ಟಿ, ಉಭಯಮಂ ಕೈಗೂಡಿಸಿ, ಏಕಪ್ರಸಾದವನೂಡಿ, ಭಕ್ತಿ ವಿವಾಹವ ಮಾಡಿದ ನೋಡಾ. ಇಂತಪ್ಪ ಭಕ್ತಿ ವಿವಾಹದ ಕ್ರಮವನ್ನರಿಯದೆ, ಮತ್ತೆ ಬೇರೆ ಜಗದ್ವ್ಯವಹಾರವನುಳ್ಳ ಪಂಚಾಂಗಸೂತಕ ಪಾತಕದ ಮೊತ್ತದ ಮದುವೆಗೆ ಹರೆಯ ಹೊಯಿಸಿ, ಹಸೆಯಂ ಸೂಸಿ, ತೊಂಡಿಲು ಬಾಸಿಂಗವೆಂದು ಕಟ್ಟಿ, ಧಾರೆಯನೆರೆದು ಭೂಮವೆಂದುಣಿಸಿ, ಹೊಲೆಸೂತಕದ ಮದುವೆಯ ಮಾಡುವ ಪಾತಕರ ಒಡಗೂಡಿಕೊಂಡು ನಡೆವವರು, ಗುರಚರಭಕ್ತರಲ್ಲ. ಅವರಿಗೆ ಪ್ರಸಾದವಿಲ್ಲ, ಪ್ರಸಾದವಿಲ್ಲವಾಗಿ ಮುಕ್ತಿಯಿಲ್ಲ. ಮುಕ್ತಿಯಿಲ್ಲದವಂಗೆ ನರಕ ತಪ್ಪದು ಕಾಣಾ, ಕಲಿದೇವಯ್ಯಾ.