Index   ವಚನ - 152    Search  
 
ಗುರುಲಿಂಗಜಂಗಮದ ಪಾದತೀರ್ಥ ಪ್ರಸಾದದಲ್ಲಿ ವಿಶ್ವಾಸ ಸಮನಿಸಿದ ಕಾರಣ, ಶಾಶ್ವತಪದವಿಯ ಪಡೆದರು ಪೂರ್ವಪುರಾತನರು. ಆ ಸದಾಚಾರದ ಹೊಲಬನರಿಯದೆ ದೂಷಕ ನಿಂದಕ ಪರವಾದಿಗಳು ನಾನು ಘನ, ತಾನು ಘನವೆಂದು ದಾಸಿ, ವೇಸಿ, ಹೊಲತಿ, ದೊಂಬಿತಿ, ಕಬ್ಬಿಲಿಗಿತಿ, ಅಗಸಗಿತಿ, ಬೇಡತಿಯರ ಅಧರರಸವ ಸೇವಿಸುವ ದುರಾಚಾರಿಯರು, ಗುರುಲಿಂಗಜಂಗಮಪ್ರಸಾದವನೆಂಜಲೆಂದು ಹೊಲೆದೈವದೆಂಜಲ ಭುಂಜಿಸಿ, ಮತ್ತೆ ತಮ್ಮ ಕುಲವ ಮೆರೆವ ಕುಜಾತಿಗಳ ನುಡಿಯ ಕೇಳಲಾಗದೆಂದ, ಕಲಿದೇವಯ್ಯ.