ಗೋಳಕ ಮೂಲಕ ಮುಕ್ತಕ ದಾರುಕ ರುದ್ರಕ ಕರ್ಣಿಕ,
ಈ ಷಟ್‍ಶಕ್ತಿಗಳು ಈ ಪಟ್ಟಣದ ಭಕ್ತೆಯರು.
ಇವರ ಮನೆಯ ಜಂಗಮ ನಾನು.
ಇವರ ಗಂಡನಿಗಾನು ಒಕ್ಕುದನಿಕ್ಕುವೆನು.
ಇವರೆನಗೆ ತನು ಮನ ಧನವ ನಿವೇದಿಸುವರು.
ಇರ್ದುದ ವಂಚಿಸದೆ ನಿವೇದಿಸುವರು.
ನಾ ಸಹಿತ ಸರ್ವಲಿಂಗಾರ್ಚನೆಯ ಮಾಡುವರು.
ನಾ ಹಿಡಿದುದನೆ ಹಿಡಿವರು, ನಾ ಬಿಟ್ಟುದನೆ ಬಿಡುವರು.
ನಾ ಬಸವಣ್ಣನ ಮನೆಯ ಜಂಗಮವೆಂದು
ಏನ ಹೇಳಿತ್ತ ಕೇಳುವರು.
ನಾ ಮಹಾದ್ವಾರದಲ್ಲಿ ಬಂದೆನೆಂದಡೆ ಎನ್ನೊಡನೆ ಬಂದರು.
ಹಂಸದ್ವಾರದಲ್ಲಿ ಬಂದೆನೆಂದಡೆ ಎನ್ನೊಡನೆ ಬಂದರು.
ಪೂರ್ವದ್ವಾರ ಪಶ್ಚಿಮದ್ವಾರ ಉತ್ತರದ್ವಾರ ದಕ್ಷಿಣದ್ವಾರ
ಇಂತಿವರೊಳಗೆ ಎನ್ನೊಡನೊಡನೆ ಬಂದರು.
ಎನ್ನ ಪ್ರಸಾದವೆ ವಿಶ್ವಾಸವಾಗಿದ್ದರು.
ನಾನಿವರ ಮನೆಯ ಜಂಗಮವು ಕಾಣಾ,
ಕಲಿದೇವಯ್ಯಾ.
Art
Manuscript
Music
Courtesy:
Transliteration
Gōḷaka mūlaka muktaka dāruka rudraka karṇika,
ī ṣaṭśaktigaḷu ī paṭṭaṇada bhakteyaru.
Ivara maneya jaṅgama nānu.
Ivara gaṇḍanigānu okkudanikkuvenu.
Ivarenage tanu mana dhanava nivēdisuvaru.
Irduda van̄cisade nivēdisuvaru.
Nā sahita sarvaliṅgārcaneya māḍuvaru.
Nā hiḍidudane hiḍivaru, nā biṭṭudane biḍuvaru.
Nā basavaṇṇana maneya jaṅgamavendu
Ēna hēḷitta kēḷuvaru.
Nā mahādvāradalli bandenendaḍe ennoḍane bandaru.
Hansadvāradalli bandenendaḍe ennoḍane bandaru.
Pūrvadvāra paścimadvāra uttaradvāra dakṣiṇadvāra
intivaroḷage ennoḍanoḍane bandaru.
Enna prasādave viśvāsavāgiddaru.
Nānivara maneya jaṅgamavu kāṇā,
kalidēvayyā.