Index   ವಚನ - 174    Search  
 
ತನ್ನ ತಾನರಿದ ಮಹಾಜ್ಞಾನಿ ಶರಣನು ಚರಿಸುವ ಕ್ರಮವೆಂತೆಂದಡೆ: ಸ್ಥೂಲವೆಂಬ ಕಂಥೆಯ ತೊಟ್ಟು, ಸೂಕ್ಷ್ಮವೆಂಬ ಟೊಪ್ಪರವನಿಕ್ಕಿ, ತತ್ವವೆಂಬ ಖರ್ಪರವನಾಂತು, ಸತ್ಯವೆಂಬ ದಂಡವಂ ಪಿಡಿದು, ಶಾಂತಿಯೆಂಬ ಭಸಿತವಂ ತೊಡೆದು, ಸುಚಿತ್ತವೆಂಬ ಮಣಿಯ ಕಟ್ಟಿ, ವೈರಾಗ್ಯವೆಂಬ ಹಾವುಗೆಯಂ ಮೆಟ್ಟಿ,ಮನದೃಢವೆಂಬ ಕೌಪವಂ ಕಟ್ಟಿ, ಆಚಾರವೆಂಬ ಕಂಕಣವನ್ನಿಕ್ಕಿ, ಕ್ಷಮೆದಮೆಗಳೆಂಬ ಕುಂಡಲಮಂ ಧರಿಸಿ, ಪರಮಾನಂದದಿಂದ ಸುಳಿದು, ಜಗವ ಪಾವನವ ಮಾಡಲೆಂದು ಭಕ್ತಿ ಭಿಕ್ಷವಂ ಬೇಡುತ್ತ ಬಂದನಯ್ಯ, ತನ್ನ ಒಲುಮೆಯ ಶರಣರ್ಗೆ ನಿಜಸುಖವನೀಯಲೆಂದು. ಕಲಿದೇವರದೇವಾ, ನಿಮ್ಮ ಶರಣ ಪ್ರಭುವೆಂಬ ಜಂಗಮವಂ ಕಂಡು, ಅರ್ಚಿಸಿ, ಪೂಜಿಸಿ, ಒಕ್ಕುದನುಂಡು, ನಿಶ್ಚಿಂತನಾದೆನಯ್ಯ.