ನಾವು ಮೀರಿದ ಸ್ಥಲದ ವಿರಕ್ತರೆಂದು ಹೇಳುವ ಅಣ್ಣಗಳಿರಾ
ನೀವು ಮೀರಿದ ಸ್ಥಲದ ವಿರಕ್ತರಾದ ಬಗೆಯ ಹೇಳಿರಣ್ಣ.
ಅರಿಯದಿರ್ದಡೆ ಹೇಳಿಹೆ ಕೇಳಿರಣ್ಣ,
ಮೀರಿನಿಂದ ವಿರಕ್ತನ ವಿಚಾರದ ಭೇದವ.
ಅನಾದಿ ಚಿದ್ಬಿಂದುವ ಅಧೋದ್ವಾರದಲ್ಲಿ ಬೀಳಗೊಡದೆ,
ಸದ್ಗುರು ಕರುಣಕಟಾಕ್ಷೆಯಿಂದ ಮಹಾಮಂತ್ರವ ಪಡೆದು,
ಆ ಚಿನ್ಮಂತ್ರ ಬಲದಿಂದ ಊರ್ಧ್ವಕ್ಕೆ ಮುಖವ ಮಾಡಿ,
ಮೇಲುಗಿರಿ ಸಿಂಹಾಸನದಲ್ಲಿ ಮೂರ್ತಗೊಂಡಿರುವ
ಪರಶಿವಲಿಂಗದ ಮಹಾಬೆಳಗಿನೊಳಗೆ ಏಕಾರ್ಥವ ಮಾಡಬೇಕು.
ಜಿಹ್ವೆಯ ತುದಿಯ ಅಜ್ಞಾನದ ಹುಸಿ ಕುಶಬ್ದ ಕುರುಚಿಯ ನೀಗಬೇಕು.
ಸದ್ಗುರುಮುಖದಿಂದ ನಿಜನುಡಿ, ಘನಪಾದೋದಕ,
ಪ್ರಸಾದಮಂತ್ರವ ಪಡೆದು, ಸದ್ಧರ್ಮರೂಪದಿಂದಿರಬೇಕು.
ಸರ್ವಾಚಾರಸಂಯುಕ್ತವಾದ ಭಕ್ತನೆ ನಿಜಮುಕ್ತಿಮಂದಿರವೆಂದು,
ಭಾವ ಮನ ಕಾಯ ತುಂಬಿ, ಪರಿಪೂರ್ಣ ತೃಪ್ತನಾದಾತನೆ
ಮೀರಿದ ಸ್ಥಲದ ವಿರಕ್ತ ನೋಡಾ, ಕಲಿದೇವರದೇವ.