Index   ವಚನ - 230    Search  
 
ಪೃಥ್ವಿಯ ಗುಣವುಳ್ಳಡೆ ಭಕ್ತ. ಅಪ್ಪುವಿನ ಗುಣವುಳ್ಳಡೆ ಮಾಹೇಶ್ವರ. ಅಗ್ನಿಯ ಗುಣವುಳ್ಳಡೆ ಪ್ರಸಾದಿ. ವಾಯುವಿನ ಗುಣವುಳ್ಳಡೆ ಶರಣ. ಆತ್ಮನ ಗುಣವುಳ್ಳಡೆ ಐಕ್ಯ. ಇಂತೀ ಕ್ಷಮೆದಮೆಶಾಂತಿಸೈರಣೆಯುಳ್ಳಾತನೆ ಷಟ್ಸ್ಥಲಬ್ರಹ್ಮಿ. ಇದು ಕಾರಣ, ಗುರುಲಿಂಗದಲ್ಲಿ ವಿಶ್ವಾಸ, ಚರಲಿಂಗದಲ್ಲಿ ಸದ್ಭಕ್ತಿಯುಳ್ಳಾತನೆ ಭಕ್ತ ಮಾಹೇಶ್ವರ. ಪರಬ್ರಹ್ಮದಲ್ಲಿ ಪರಿಣಾಮವುಳ್ಳಾತನೆ ಪ್ರಸಾದಿ. ತನ್ನ ತಾನರಿದು, ಇದಿರ ಮರೆದಾತನೆ ಪ್ರಾಣಲಿಂಗಿ. ಅನುಪಮಜ್ಞಾನದಿಂದ ತನ್ನ ನಿಜಸ್ವರೂಪವ ತಿಳಿಯಬಲ್ಲಾತನೆ ಶರಣ. ಪಿಂಡಬ್ರಹ್ಮಾಂಡವನೊಳಕೊಂಡು ಚಿದಾನಂದಬ್ರಹ್ಮದಲ್ಲಿ ಕೂಡಬಲ್ಲಾತನೆ ಐಕ್ಯ. ಇಂತಪ್ಪ ವರ್ಮಾದಿ ವರ್ಮವನರಿಯದ ಅದ್ವೈತಿಗಳೆಲ್ಲ, ಭವಕ್ಕೆ ಬೀಜರಯ್ಯಾ, ಕಲಿದೇವರದೇವ.