Index   ವಚನ - 242    Search  
 
ಬಸವಣ್ಣನ ಬಳಿಯಯ್ಯಾ ಗಂಗೆವಾಳುಕಸಮಾರುದ್ರರು. ಬಸವಣ್ಣನ ಫಲವಯ್ಯಾ ಓಂ ನಮಃ ಶಿವಾಯ ಎಂಬವರೆಲ್ಲರು. ಬಸವಣ್ಣನ ಆಜ್ಞೆಯಯ್ಯಾ ಎಲ್ಲ ಶಿವಾರ್ಚಕರು. ಬಸವಣ್ಣನ ಘನವಯ್ಯಾ ತನುದಾಸೋಹಿಗಳು. ಬಸವಣ್ಣನ ಧನವಯ್ಯಾ ಪಾದೋಕಪ್ರಸಾದಿಗಳು. ಬಸವಣ್ಣನ ಮನವಯ್ಯಾ ತನುಪದಾರ್ಥವ ಮಾಡಿ, ಗುರುಲಿಂಗಜಂಗಮಕ್ಕರ್ಪಿಸುವರು. ಬಸವಣ್ಣ ಮಾಡಿದ ಅನುಗಳಯ್ಯಾ, ಕನಸಿನಲ್ಲಿ ಮನಸಿನಲ್ಲಿ ಶಿವಶಿವಾ ಎಂಬರೆಲ್ಲರು. ಬಸವಣ್ಣನ ಬಂಧುಗಳಯ್ಯಾ ಎಲ್ಲಾ ಶಿವಲಾಂಛನಿಗಳು. ಬಸವಣ್ಣನ ಪ್ರಸಾದಿಗಳಯ್ಯಾ. ಬಸವಣ್ಣನ ನಾಮಾಮೃತವ ನೆನೆವರೆಲ್ಲರು. ಎಲೆ ಕಲಿದೇವರದೇವಾ, ಬಸವಣ್ಣನ ಆಜ್ಞೆಯಲ್ಲಿ ನೀನಿರ್ದೆಯಾಗಿ, ಎಲ್ಲ ಶಿವಭಕ್ತರ ತನುಮನಧನಸಹಿತ ನಾನಾದೆನಯ್ಯಾ.