Index   ವಚನ - 255    Search  
 
ಬ್ರಾಹ್ಮಣ ದೈವವೆಂದು ಆರಾಧಿಸಿದ [ಕಾರಣ] ಗೌತಮಗೆ ಗೋವಧೆಯಾಯಿತ್ತು. ಬ್ರಾಹ್ಮಣ ದೈವವೆಂದು ಆರಾಧಿಸಿದ ಕಾರಣ ಕರ್ಣನ ಕವಚ ಹೋಯಿತ್ತು. ಬ್ರಾಹ್ಮಣ ದೈವವೆಂದು ಆರಾಧಿಸಿದ ಕಾರಣ ನಾಗಾರ್ಜುನನ ತಲೆ ಹೋಯಿತ್ತು. ಬ್ರಾಹ್ಮಣ ದೈವವೆಂದು ಆರಾಧಿಸಿದ ಕಾರಣ ದಕ್ಷಂಗೆ ಕುರಿದಲೆಯಾಯಿತ್ತು. ವಿಷ್ಣು ದೈವವೆಂದು ಆರಾಧಿಸಲು ಬಲಿಗೆ ಬಂಧನವಾಯಿತ್ತು. ವಿಷ್ಣು ದೈವವೆಂದು ಆರಾಧಿಸಿದ ಕಾರಣ ಪಾಂಡವರಿಗೆ ದೇಶಾಂತರ ಯೋಗವಾಯಿತ್ತು. ವಿಷ್ಣು ದೈವವೆಂದು ಆರಾಧಿಸಲು ಪರಶುರಾಮ ಸಮುದ್ರಕ್ಕೆ ಗುರಿಯಾದ. ವಿಷ್ಣು ದೈವವೆಂದು ಆರಾಧಿಸಲು ವ್ಯಾಸನ ತೋಳು ಆಕಾಶಕ್ಕೆ ಹೋಯಿತ್ತು. ಈ ದೃಷ್ಟವಿದ್ದು, ಮಾಯಿರಾಣಿಯ ದೈವವೆಂದು ಆರಾಧಿಸಿದ ಕಾರಣ ತಲೆಯಲ್ಲಿ ಕೆರವ ಕಟ್ಟಿ, ಕೊರಳಲ್ಲಿ ಕವಡೆಯ ಕಟ್ಟಿ, ಬೇವನುಟ್ಟು, ಜಾವಡಿ ಅರಿಯ ಲಜ್ಜೆ ಹೋಯಿತ್ತು. ಮುಂದೆ ಭೈರವ ದೇವರೆಂದು ಆರಾಧಿಸಿದ ಕಾರಣ ಕರುಳ ಬೆರಳ ಖಂಡಿಸಿ ತುತ್ತು ತುತ್ತಿಗೆ ಅಂತರಂಗ ಬಹಿರಂಗವಾಯಿತ್ತು. ಮುಂದೆ ಜಿನನ ದೈವವೆಂದು ಆರಾಧಿಸಿದ ಕಾರಣ ಜೈನ ಮಾಡಿದ ಕರ್ಮ ನಿಷ್ಕರ್ಮವಾದುದಾಗಿ ನರರ ಹಾಡಿದಡೆ ಗತಿಯಿಲ್ಲ, ಕೇಳಿದರೆ ಗತಿಯಿಲ್ಲ ಹರ ನಿಮ್ಮ ಶರಣರ ಶ್ರೀಪಾದವೆ ಗತಿಯಾಗಿದ್ದೆ ನೋಡಾ. ಹರ ನಿಮ್ಮ ಶರಣರ ಒಲವಿಂದ ತುತ್ತು ಬುತ್ತಿಗೆ ಬೆನ್ನುಹತ್ತುವ ಮಾರಿ ಮಸಣಿ ಮೈಲಾರ ಹೊನ್ನ ಲಕ್ಷ್ಮಿಗಳು ಅರ್ಥ ಆಯುಷ್ಯವ ಕೊಡಬಲ್ಲವೆ? ಒಡೆಯನಿಲ್ಲದ ಮನೆಯ ತುಡುಗುಣಿನಾಯಿ ಹೊಗುವಂತೆ, ಜಡದೇಹಿಗಳ ತನುವ ಕಾಡುತಿಹವೆಂದಾ ಕಲಿದೇವಯ್ಯ.