Index   ವಚನ - 309    Search  
 
ಶಿವಭಕ್ತಿಸಂಪುಟವಾದ ಮಹಾಮಹಿಮರ ನಿಲವು, ನಾದದ ಉತ್ಪತ್ಯವ ಸೋಂಕದು. ಬಿಂದುವಿನಾಶ್ರಯದಲ್ಲಿ ಬೆಳೆಯದು. ಶುಕ್ಲಶೋಣಿತಾಮೇಧ್ಯ ಮಜ್ಜೆ ಶ್ಲೇಷ್ಮವೆಂಬ ಪಂಚವರ್ಗಾಶ್ರಯವನು ಹೊದ್ದದು. ಸತ್ವ ರಜ ತಮವೆಂಬ ತ್ರಿಗುಣವ ಹೊದ್ದದು, ಮನ ಬುದ್ದಿ ಚಿತ್ತಾಹಂಕಾರವೆಂಬ ಅಂತಃಕರಣ ಚತುಷ್ಟಯಂಗಳಲ್ಲಿ ನಡೆಯದು ಪೃಥ್ವಿ ಅಪ್ಪು ತೇಜ ವಾಯುವಾಕಾಶವೆಂಬ ಪಂಚಭೂತದಾಶ್ರಯವನು ಹೊದ್ದದು ಅಷ್ಟದಳಕಮಲವ ಮುಟ್ಟದು. ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕ್ರಕರ ದೇವದತ್ತ ಧನಂಜಯವೆಂಬ ದಶವಾಯುಗಳಿಚ್ಫೆಯಲ್ಲಿ ಸುಳಿದಾಡದು. ಜ್ಞಾನದಲ್ಲಿ ಬೆಳೆವುದು, ನಿರಾಲಂಬದಲ್ಲಿ ಆಡುವುದು. ಹೃದಯಕಮಲಪದ್ಮಪತ್ರ ಉಸಿರನಾಲಿಸಿ, ಶಿರಸಂಪುಟದ ಜಂಗಮದಾಟವನಾಡುವುದು. ಲಿಂಗದ ನೋಟವ ನೋಡುವುದು, ಮಹಾಘನದಲ್ಲಿ ಬೆಳೆವುದು, ನಿಜನಿರಾಳದಲ್ಲಿ ನಿವಾಸಿಯಾಗಿಪ್ಪುದು ಕಲಿದೇವಾ, ನಿಮ್ಮ ಶರಣ ಬಸವಣ್ಣನ ನಿಲವು.