Index   ವಚನ - 318    Search  
 
ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣನೆಂದೆಂಬರು. ನಾನದ ಮನದಲ್ಲಿ ಹಿಡಿದು ಮಾತಾಡುವೆನಲ್ಲದೆ ಕ್ರೀಯಿಂದ ಕಾಣೆ. ಸತ್ತೆ ಗುರು, ಚಿತ್ತೆ ಲಿಂಗ, ಆನಂದವೆ ಜಂಗಮ. ನಿತ್ಯವೆ ಪ್ರಸಾದ, ಪರಿಪೂರ್ಣವೆ ಪಾದೋಕವೆಂಬುದನವಗ್ರಹಿಸಿ ನಿಂದು, ಜಂಗಮಕ್ಕೆ ಭಕ್ತನಾದೆನಯ್ಯಾ. ನಿತ್ಯನಾಗಿ ನಿಮ್ಮ ಜಂಗಮಕ್ಕೆ ವಂದಿಸುವೆ. ಆನಂದದಿಂದ ನಿಮ್ಮ ಜಂಗಮದ ಪಾದೋದಕವ ಕೊಂಬೆ. ಪರಿಪೂರ್ಣನಾಗಿ ನಿಮ್ಮನರ್ಚಿಸಿ ಪೂಜಿಸಿ ಪರವಶನಪ್ಪೆ ನಾನು. ಭಕ್ತಿಪ್ರಸಾದ ಮುಕ್ತಿಪ್ರಸಾದ ನಿತ್ಯಪ್ರಸಾದವ ನಿಮ್ಮ ಜಂಗಮದಲ್ಲಿ ವರವ ಪಡೆದು, ಕಲಿದೇವರದೇವಾ, ನಿಮ್ಮ ಶರಣ ಪ್ರಭುದೇವರ ಶ್ರೀಪಾದದಲ್ಲಿ ಮನಮಗ್ನನಾಗಿರ್ದೆನಯ್ಯ.