ಹರನೊಡ್ಡಿದ ಮಾಯೆ, ಹರಿಯ ಹತ್ತು ಭವಕ್ಕೆ ತಂದಿತ್ತು.
ಅರುಹನೆಂಬವನ ಬತ್ತಲೆ ಬರಿಸಿತ್ತು.
ಪರವು ತಾನೆಂಬ ಬ್ರಹ್ಮನ ಶಿರವ ಹೋಗಾಡಿತ್ತು.
ಗುರುಲಿಂಗಜಂಗಮದ ಹವಣನರಿಯಬೇಕೆಂದು
ತಂದೆ ತಾಯಿ ಗುರುವೆಂದು ಹೊತ್ತು ತಿರುಗಿದ ಚೌಂಡಲಯ್ಯ
ಒಂದೆ ಬಾಣದಲ್ಲಿ ಗುರಿಯಾಗಿ ಸತ್ತ ಕೇಡ ನೋಡಾ.
ಇಂತಿದನರಿಯದೆ ಮರದ ನರಜೀವಿಗಳು
ಸುರೆಯ ದೈವದ ಸೇವೆಯ ಮಾಡಿ, ಇತ್ತ ಹರನ ಹೊಗಳಿ,
ವೇದ ಶಾಸ್ತ್ರ ಪುರಾಣಾಗಮಂಗಳನರಿತರಿತು,
ಮರಳಿ ಅನ್ಯದೈವಕ್ಕೆರಗುವ ದುರಾತ್ಮರಿಗೆ
ಇಹಪರವಿಲ್ಲವೆಂದ, ಕಲಿದೇವರದೇವ.