Index   ವಚನ - 2    Search  
 
ಅಯ್ಯಾ, ಅಷ್ಟತನುಮೂರ್ತಿಗಳಿಲ್ಲದಲ್ಲಿಂದತ್ತತ್ತ ಅನಿರ್ವಾಚ್ಯವಾಗಿರ್ದಿರಯ್ಯ. ಅಯ್ಯಾ, ನಿಮ್ಮ ವಿನೋದದಿಂದ ನೀವೇ ವಾಚಾಸ್ವರೂಪದಿಂದ ಜಂಗಮವಾದಿರಿ ದೇವಾ. ನಿಮ್ಮ ಮಹಾತ್ಮೆಯ ನೀವೆ ಬಲ್ಲಿರಿ. ನಿಮ್ಮ ಮುಖವೈದರಿಂದ ಉದಯಿಸಿದ ಪಂಚಭೂತಾದಿ ಸಕಲತತ್ವಂಗಳೇ ಪದಾರ್ಥವೆಂದು ನಿಮಗರ್ಪಿಸಲು, ಪಂಚಾಕ್ಷರಿ ಪ್ರಾಣಾತ್ಮಕನಾಗಿ ಬಂದಾತ ಬಸವಣ್ಣ. ಪಾದತೀರ್ಥದಲ್ಲಿ ಬೆಳಸ ಬಿತ್ತಿ, ಕ್ರೀಯಿಂದಾದ ಬೆಳೆಸಿರಿವಂತನಾಗಿ ಗುರುವಿಂಗಿತ್ತ, ಲಿಂಗಕಿತ್ತ, ಮತ್ತಾ ಜಂಗಮಕಿತ್ತ ಬಸವಣ್ಣ. ಬಸವಣ್ಣನಿಂತಹ ಶ್ರೀಮಂತನೆಂದರಿದು, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮ ಶರಣ ಬಸವಣ್ಣಕೊಂಡಿರ್ದೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ.