Index   ವಚನ - 5    Search  
 
ಇಷ್ಟಲಿಂಗಕ್ಕೊಂದು ಕಷ್ಟ ಬಂದಿತ್ತೆಂದು ಮುಟ್ಟಲಾಗದು. ಇನ್ನು ಕೆಟ್ಟೆನೆಂಬ ಪಾಪಿಗಳು ನೀವು ಕೇಳಿರೆ. ಇಷ್ಟಲಿಂಗ, ಪ್ರಾಣಲಿಂಗದ ಆದಿ ಅಂತ್ಯವನಾರುಬಲ್ಲರು ? ಹೃದಯಕಮಲ ಭ್ರೂಮಧ್ಯದಲ್ಲಿ[ಯ] ಸ್ವಯಂಜ್ಯೋತಿಯ ಪ್ರಕಾಶ[ನು] ಆದಿ ಮಧ್ಯಸ್ಥಾನದಲ್ಲಿ ಚಿನ್ಮಯ ಚಿದ್ರೂಪನಾಗಿಹ. ಇಂತಪ್ಪ ಮಹಾಘನವ ಬಲ್ಲ ಶರಣನ ಪರಿ ಬೇರೆ. ಇಷ್ಟಲಿಂಗ ಹೋದ ಬಟ್ಟೆಯ ಹೊಗಲಾಗದು. ಈ ಕಷ್ಟದ ನುಡಿಯ ಕೇಳಲಾಗದು. ಕೆಟ್ಟಿತ್ತು ಜ್ಯೋತಿಯ ಬೆಳಗು, ಅಟ್ಟಾಟಿಕೆಯಲ್ಲಿ ಅರಿವುದೇನೊ ? ಆಲಿ ನುಂಗಿದ ನೋಟದಂತೆ, ಪುಷ್ಪ ನುಂಗಿದ ಪರಿಮಳದಂತೆ, ಜಲ ನುಂಗಿದ ಮುತ್ತಿನಂತೆ, ಅಪ್ಪುವಿನೊಳಗಿಪ್ಪ ಉಪ್ಪಿನಂತೆ, ಬೀಜದೊಳಗಿಪ್ಪ ವೃಕ್ಷದಂತೆ, ಶಬ್ದದೊಳಗಿನ ನಿಃಶಬ್ದದಂತೆ, ಬಯಲ ನುಂಗಿದ ಬ್ರಹ್ಮಾಂಡದಂತೆ, ಉರಿವುಂಡ ಕರ್ಪುರದಂತೆ. ಇಂತಪ್ಪ ಮಹಾಘನ ತೇಜೋಮೂರ್ತಿಯ ನಿಲವ ಬಲ್ಲ ಮಹಾಶರಣನ ಮನೆಯ ಎತ್ತು ತೊತ್ತು ಮುಕ್ಕಳಿಸಿ ಉಗುಳುವ ಪಡುಗ, ಮೆಟ್ಟುವ ಚಮ್ಮಾವುಗೆಯಾಗಿ ಬದುಕಿದೆನಯ್ಯಾ. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಲಿಂಗವಂತನ ನಿಲವಿನ ಪರಿಯ ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.