Index   ವಚನ - 27    Search  
 
ಶೀಲದ ತುದಿಯ ಮೊದಲನರಿಯದೆ, ವ್ರತದಾಚರಣೆಯ ಕ್ರಮವನರಿಯದೆ, ಆಚಾರದ ನೆಲೆಯನರಿಯದೆ, ಬರಿದೆ ವ್ರತ ಶೀಲಾಚಾರವೆಂದೆಂಬಿರಿ. ವ್ರತಶೀಲಾಚಾರದ ಸ್ವರೂಪವನರಿಯದ, ಅದರಾಚರಣೆಯನರಿಯದ ಶೀಲವಂತರು ನೀವು ಕೇಳಿ ಭೋ. ತನುವಿನ [ಗುಣವ] ಮನದಲ್ಲಿಗೆ ತಂದು, ಆ ಮನದ ಅನುವನರಿದು, ಶುಚಿ ಶೀಲ ಉಚ್ಯತೆಯೆಂದುದಾಗಿ, ಸಚ್ಚರಿತ್ರವನುಳ್ಳ ಆಚಾರವೆ ಸ್ವರೂಪವಾದ ಘನಲಿಂಗವ ಬೆರಸಬಲ್ಲಡೆ ಅದು ಶೀಲ. ಮನದ ತನುವ ಮಹಾಘನದರುವಿನಲ್ಲಿಗೆ ತಂದು ಅರಿವಿನ ಆಚಾರವೆ ಗುರುಲಿಂಗಜಂಗಮ ಪ್ರಸಾದ ಪಾದತೀರ್ಥ ಭಕ್ತಿ ಎಂದರಿದು, ಅವರ ಸ್ವರೂಪವನರಿದು, ಆಚರಿಸಿದ ಘನ ಶರಣರ ಬೆರಸಬಲ್ಲಡೆ ಅದು ವ್ರತ. ಸದಾಚಾರ ನಿಯತಾಚಾರ,ಭಕ್ತ್ಯಾಚಾರ ಶಿವಾಚಾರ ಸಮಯಾಚಾರ ಗಣಾಚಾರವೆಂಬವುಗಳ ಸ್ವರೂಪವನರಿದು ಆಚರಿಸಬಲ್ಲಡೆ ಅದು ಆಚಾರ. ವ್ರತ ಶೀಲಾಚಾರದ ಅನುವನರಿಯದೆ, ಘನ ಶರಣರ ಬೆರಸದೆ,ತನುಮನಧನವ ಗುರುಲಿಂಗಜಂಗಮಕ್ಕೆ ಸವೆಸದೆ ಬರಿದೆ ಅನುವಿನ ತನುವಿನ ಕೊನೆಯ ಮೊನೆಯ ಮೇಲಣ ಜ್ಯೋತಿಯ ತಮ ತಮಗೆ ಅರಿದೆಹೆನೆಂಬವರೆಲ್ಲರೂ ಅನುಮಾವನನರಿಯದೆ ಕೆಟ್ಟರು ಕಾಣಾ, ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನ ದೇವಯ್ಯಾ. ನಿಮ್ಮ ಶರಣರ ಅನುವನರಿದು, ಘನವ ಬೆರಸಬಲ್ಲ ಶರಣ ಸಂಗನಬಸವಣ್ಣನು, ಇಂತಪ್ಪ ಮಹಾಲಿಂಗವಂತರ ನಿಲವಿನ ಪರಿಯ ನೀವೇ ಬಲ್ಲಿರಲ್ಲದೆ, ನಾನೆತ್ತ ಬಲ್ಲೆನಯ್ಯಾ ? ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.