ಹೃದಯದ ಕೊನೆಯ ಮೇಲೆ ಬಂದ ಪರಿಣಾಮದ ತೃಪ್ತಿಯ ಸುಖವ,
ಹೃದಯದ ಮನದ ಕೊನೆಯ ಮೊನೆಯ ಮೇಲೆ,
ಮಹಾಲಿಂಗಕ್ಕೆ ಸಮರ್ಪಿಸಬೇಕು.
ಶ್ರೋತ್ರದ ಕೊನೆಯಲ್ಲಿ ಬಂದ ಸಂಗೀತದ ಪರಿಣಾಮವ,
ಅವಧಾನದ ಶ್ರೋತ್ರದ ಕೊನೆಯ ಮೊನೆಯ ಮೇಲೆ,
ಪ್ರಸಾದಲಿಂಗಕ್ಕೆ ಅರ್ಪಿಸಬೇಕು.
ನೇತ್ರದ ಕೊನೆಯಲ್ಲಿ ಬಂದ ಸುಲಕ್ಷಣ ಸುರೂಪಿನ ಪರಿಣಾಮವ,
ಅವಧಾನದ ಮನದ ಕೊನೆಯ ಮೊನೆಯ ಮೇಲೆ,
ಶಿವಲಿಂಗಕ್ಕೆ ಸಮರ್ಪಿಸಬೇಕು.
ನಾಸಿಕದ ಕೊನೆಯಲ್ಲಿ ಬಂದ ಸುಗಂಧದ ಪರಿಣಾಮವ,
ಅವಧಾನದ ಮನದ ಕೊನೆಯ ಮೊನೆಯ ಮೇಲೆ,
ಆಚಾರಲಿಂಗಕ್ಕೆ ಅರ್ಪಿಸಬೇಕು.
ಜಿಹ್ವೆಯ ಕೊನೆಯಲ್ಲಿ ಬಂದ ಸುಸ್ವಾದುವಿನ ಪ್ರಸಾದದ ರುಚಿಯ ಪರಿಣಾಮವ,
ಅವಧಾನದ ಮನದ ಕೊನೆಯ ಮೊನೆಯ ಮೇಲೆ,
ಗುರುಲಿಂಗಕ್ಕೆ ಸಮರ್ಪಿಸಬೇಕು.
ತ್ವಕ್ಕಿನ ಕೊನೆಯಲ್ಲಿ ಬಂದಸ್ಪರ್ಶನದ ಸುಖದ ಪರಿಣಾಮವ,
ಅವಧಾನದ ಮನದ ಕೊನೆಯ ಮೊನೆಯ ಮೇಲೆ,
ಜಂಗಮಲಿಂಗಕ್ಕೆ ಸಮರ್ಪಿಸಬೇಕು.
ಮನದಲ್ಲಿ ತಟ್ಟುವ ಮುಟ್ಟುವ ತಾಗುನಿರೋಧವೆಲ್ಲವನೂ
ಅವಧಾನದ ಮನದ ಕೊನೆಯ ಮೊನೆಯ ಮೇಲೆ,
ಮಹಾಘನಲಿಂಗಕ್ಕೆ ಸಮರ್ಪಿಸಬೇಕು.
ಈ ಕ್ರಮವನರಿದು ಸರ್ವಾವಧಾನಿಯಾಗಿ,
ಗುರುಲಿಂಗಜಂಗಮಮುಖದಲ್ಲಿ ತನುಮನಧನವನರ್ಪಿಸಿ,
ಆ ಶುದ್ಧಸಿದ್ಧಪ್ರಸಿದ್ಧಪ್ರಸಾದದ ರೂಪುರುಚಿತೃಪ್ತಿಯ
ಆದಿಮಧ್ಯಾಂತವನರಿದು, ಸಾವಧಾನಭಕ್ತಿಯಿಂ
ಇಷ್ಟಪ್ರಾಣಭಾವಲಿಂಗಕ್ಕರ್ಪಿಸಿ, ಮಹಾಪ್ರಸಾದಿಯಾಗಿಪ್ಪಾತ,
ನಮ್ಮ ಚನ್ನಬಸವಣ್ಣ ಕಾಣಿರಯ್ಯಗಳಿರಾ.
ಈ ಪ್ರಕಾರದ ಅವಧಾನ ಮನದ ಕೊನೆಯ ಮೊನೆಯ ಮೇಲೆ,
ಸರ್ವಾರ್ಪಿತಕ್ರಮವನರಿದು ಪ್ರಸಾದಭೋಗಿಯಾಗಿಪ್ಪಾತನು,
ನಮ್ಮ ಸಂಗನಬಸವಣ್ಣನು ಕೇಳಿರಣ್ಣಗಳಿರಾ.
ಈ ಬಸವಣ್ಣನ ಪ್ರಸಾದವ ಕೊಂಡು ನಾನು ಬದುಕಿದೆನು ಕಾಣಾ,
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ.
ಮತ್ತೀ ಕ್ರಮವನರಿದು, ಅರ್ಪಿತಮುಖವನರಿದು ಅರ್ಪಿಸಿ,
ತೃಪ್ತಿಯನೈದಬಲ್ಲ ಶರಣರ ಮಹಾತ್ಮೆಯ ನೀವೆ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.