Index   ವಚನ - 1    Search  
 
ಆ ನಿಜದರಿವು ತಾನೊಂದು ಬಂಧನದಿಂದ ಮರೆಯಾದುದ ತಾನರಿಯದೆ, ಮರವೆಯ ಗುಣ ಇದಿರಿಗೆ ಅದೆಯೆಂದು ಸಂಪಾದಿಸುವಾಗ, ಆ ತೆರ ಶಿಲೆಯ ನೆಳಲಿನ ಮರೆಯಲ್ಲಿ ತನ್ನಂಗ ಬಿಂಬಿಸಲಿಂತಾಗಿ, ಅರಿ ಇದಿರಾಯಿತ್ತೆಂದು, ಶಿಲೆಯ ಕೊಂಡು, ತಾನೊಂದು ಚೇತರಿಸಿಕೊಂಡು ನಿಂದ ಗಜದಂತೆ, ನಿಜದರಿವು ತ್ರಿಗುಣಾತ್ಮಕದಲ್ಲಿ ಬೆರಸಿ, ತ್ರಿದೋಷದ ದೆಸೆಯಿಂದ ನಾನಾದರುಶನ ಪಕ್ಷಪಾತಂಗಳಲ್ಲಿ ಹೊತ್ತು ಹೋರಿ, ಅಧ್ಯಾತ್ಮ, ಆದಿಭೌತಿಕ, ಆದಿದೈವಿಕಂಗಳ ತಿಳಿಯಬೇಕೆಂದು, ಭೂತಭವಿಷ್ಯದ್ವರ್ತಮಾನವ ವಿಚಾರಿಸಿಹೆನೆಂದು, ಷಡುದರುಶನವ ಸಂಪಾದಿಸಿಹೆನೆಂದು, ಪಂಚಭೌತಿಕ ಭೇದ, ಪಂಚವಿಂಶತಿತತ್ವ ಮೂವತ್ತಾರು ಕ್ರಮ, ಐವತ್ತೊಂದು ಮೆಟ್ಟು,ನೂರೊಂದರ ಲಕ್ಷ. ಇಂತಿವ ಪ್ರಮಾಣಿಸಿ ತಿಳಿದಲ್ಲಿ, ಅದಕ್ಕೆ ಬೇರೆ ಬೇರೆ ಸೂರ್ಯ ಚಂದ್ರ ಆಕಾಶ ವಾಯು ಆಗ್ನಿ ಉದಕ ಪೃಥ್ವಿ ಬೇರೊಂದು ನೆಲಹೊಲಬುಂಟೆ ? ಇಂತಿವೆಲ್ಲವು ವಸ್ತುಮಯದೊಳಗಿದ್ದ ಲಕ್ಷ. ಊರೊಳಗಣ ಹಲವು ಕುಲವೆಲ್ಲವೂ ಅರಸಿನ ದೆಸೆ ಕುಲದಲ್ಲಿ ಎಸಕವ ತಿಳಿದಡಗಿದ ತೆರದಂತೆ, ಅರಿದು ನಡೆವ ಪರಮವಿರಕ್ತಂಗೆ ಹಲವುಮಾತಿನ ಬಲೆಯ ಭ್ರಮೆಯಿಲ್ಲ. ಗೆಲ್ಲಸೋಲದ ಕಲ್ಲೆದೆಯವನಲ್ಲ. ಅಲ್ಲಿಗಲ್ಲಿಗೆ ಬಲ್ಲರಿಯರೆಂದು ಕೋಲಾಟಿಗರಂತೆ ಕಥೆ ಕಾವ್ಯವೆಲ್ಲವ ಹೇಳುವನಲ್ಲ. ತ್ರಿವಿಧಮಲವಿಲ್ಲದಡೆ ಒಲ್ಲೆನೆಂದು ತನ್ನಲ್ಲಿಗೆ ಬಂದಡೆ, ಕೂಡಿ ಕದಂಬನಾಗಿ, ಮಧು ಮಕ್ಷಿಕನಂತೆ ಸಂಸಾರದಲ್ಲಿಯೆ ಸಾವನಲ್ಲ. ಕಲ್ಲಿಯೊಳಗಣ ಮಕರದ ಜೀವದಂತೆ, ಸಂಸಾರದಲ್ಲಿಯೆ ಹೋದಕುಳಿಗೊಂಬನಲ್ಲ. ಆತನ ಇರವು ದಗ್ಧಪಟದಂತೆ, ರತ್ನದೀಪ್ತಿಯ ಹೊದ್ದಿಗೆಯ ತೆರದಂತೆ, ಸ್ಫಟಿಕದ ನಿರ್ದೇಹದ ವರ್ಣದ ಹೊದ್ದಿಗೆಯಂತೆ, ಇಂತು ಚಿದ್ರೂಪನ ಇರವು. ಊರ್ಧ್ವರೇತೋಮೂರ್ತಿ ಶ್ವೇತಸ್ವಯಂಭು ಕಪಿಲೇಶ್ವರಲಿಂಗದೊಳಗಾದವನ ಇರವು