Index   ವಚನ - 730    Search  
 
ಅಂದಂದಿಗೆ ಬಂದ ಧನವನಂದಂದಿಂಗೆ ವೆಚ್ಚವ ಮಾಡಿ ಹಿಂದು ಮುಂದ ಸಮವ ಮಾಡಿ, ಮಧ್ಯ ನಿರಾಳ ಊರ್ಧ್ವ ತಾನಾಗಿದ್ದು ಇಲ್ಲದಂತಿಪ್ಪಡೆ ಇದೇ ತೆರನು ಕಂಡಯ್ಯಾ. ಆರ ವಶವಲ್ಲದ ಪುರುಷನೊಬ್ಬನ ಸಾಧಿಸಿಕೊಳಬಲ್ಲಡೆ ಆ ಹಿರಿಯರಿಬ್ಬರೂ ತನ್ನ ವಶರಪ್ಪರು. ಆ ಹಿರಿಯರಿಬ್ಬರೂ ತನ್ನವರಾದಡೆ ಸರ್ವವೂ ಸಾಧ್ಯವಪ್ಪುದು. ಸರ್ವವೂ ಸಾಧ್ಯವಾದಡೆ ತಾನಿಲ್ಲ. ಬಯಲಹುದಕ್ಕೆ ಇದೇ ಚಿಹ್ನ ನೋಡಾ. ಹೀಗೆಂದು ನಂಬುವುದು,ನಂಬದಿದ್ದಡೆ ಚೆನ್ನಬಸವಣ್ಣನ ಹೊಣೆಯ ಕೊಡುವೆ ಕಾಣಾ ಗುಹೇಶ್ವರಾ.