ವಚನ - 760     
 
ಅನಾದಿ ಶರಣನ ಹೃತ್ಕಮಲ ಮಧ್ಯದ ತೇಜೋಮಯವನೇನೆಂದುಪಮಿಸುವೆನಯ್ಯಾ? ಜಲವೆ ಪಾದ ಶಿಲೆ, ಪೃಥ್ವಿಯೆ ಪಿಂಡಿಗೆ, ಆಕಾಶವೆ ಲಿಂಗ, ಸಪ್ತ ಸಮುದ್ರಗಳೆ ಪಂಚಾಮೃತ, ಮೇಘವೆ ಅಗ್ಘವಣಿಯ ಬಿಂದಿಗೆ, ಮಳೆಗಾಲವೆ ಮಜ್ಜನ, ಚಂದ್ರಮನೆ ನೊಸಲ ಗಂಧ, ನಕ್ಷತ್ರವೆ ಅಕ್ಷತೆ, ತರುಮರಾದಿಗಳೆ ಪತ್ರೆಪುಷ್ಪ, ಮೊಳಗೆ ಪಂಚಮಹಾವಾದ್ಯ! ಮಾಗಿಯೆಂಬ ಪರಿಯಾಣವ ಬೆಳಗಿ, ಬೇಸಗೆಯೆಂಬ ಓಗರವ ಗಡಣಿಸಿ ಸರ್ವಪರಿಮಳವೆಂಬ ತುಪ್ಪವನೆರೆದು, ಪರವೆಂಬ ಮೇಲೋಗರವನಿಕ್ಕಿ ಬೆಳಗು ಕತ್ತಲೆಯೆಂಬ ಕನ್ನಡವ ಕಟ್ಟಿ, ಲಿಂಗವ ಆರೋಗಣೆಯ ಮಾಡಿಸಿ ಸುಜ್ಞಾನದಲ್ಲಿ ಕೈಗೆರೆದು, ಭಾವವೆಂಬ ವೀಳೆಯವ ಕೊಟ್ಟು, ಅನು ನೀನೆಂಬ ಅನುಲೇಪಗಂಧವ ಪೂಸಿ ವಾಯುವೆಂಬ ವಸ್ತ್ರವ ನುಡಿಸಿ, ಗುಹೇಶ್ವರನೆಂಬ ಲಿಂಗ ಪರಿಪೂರ್ಣವಾಗಿದ್ದ ಬಳಿಕ, ಮಜ್ಜನಕ್ಕೆರೆವ ಠಾವಾವುದೈ ಸಂಗನಬಸವಣ್ಣಾ?