ವಚನ - 774     
 
ಅಯ್ಯಾ! ಒಂದು ಕೋಟಿ ವರುಷ ತಲೆ ಕೆಳಗಾಗಿ ತಪವ ಮಾಡಿದಕಿಂದಲು ಒಂದು ದಿನ ಶಿವಭಕ್ತರಲ್ಲಿ ನಿರಹಂಕಾರವಾಗಿರ್ದಡೆ ಸಾಕು ನೋಡಾ. ಒಂದು ಕೋಟಿ ವರುಷ ಊರ್ಧ್ವಮುಖವಾಗಿ ಸೂರ್ಯನ ನೋಡಿದ ಫಲವು ಒಂದು ದಿನ ಸದಾಚಾರ ಸದ್ಧರ್ಮರಪ್ಪ ಶಿವಭಕ್ತರ ನೋಡಿದುದಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ಅಖಿಳ ದೇವತೆಗಳ ಸ್ತೋತ್ರವ ಮಾಡಿದ ಫಲವು ಒಂದು ದಿನ ಶರಣರಿಗೆ ಶರಣು ಮಾಡಿದುದಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ಅರವತ್ತಾರು ಕೋಟಿ ನದಿಗಳ ಮಿಂದು ಮುಡಿಯಿಟ್ಟ ಫಲವು, ಒಂದು ದಿನ ಸದ್ಭಕ್ತ ಜಂಗಮ ಶರಣಗಣ ತೀರ್ಥಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ಚಾಂದ್ರಾಯಣವ್ರತ ಮೊದಲಾದ ಸರ್ವವ್ರತಂಗಳ ನಡಸಿದ ಫಲವು ಒಂದು ದಿನ ಗುರು - ಲಿಂಗ - ಜಂಗಮ - ಪ್ರಸಾದಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ವೇದಾಗಮ ಪುರಾಣಶಾಸ್ತ್ರ ಮಂತ್ರಂಗಳ ಓದಿದ ಫಲವು ಒಂದು ದಿನ ಶಿವಭಕ್ತಶರಣರ ಸಂಭಾಷಣಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ಮಹಾಯೋಗವ ಮಾಡಿದ ಫಲವು ಒಂದು ದಿನ ಶ್ರೀಗುರು ಲಿಂಗ ಜಂಗಮ ಧ್ಯಾನಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ಷೋಡಶ ಮಹಾದಾನಂಗಳ ಮಾಡಿದ ಫಲವು ಒಂದು ದಿನ ಸದ್ಧರ್ಮಿ ಶಿವಯೋಗಿಗೆ ನೀಡಿದ ತೃಪ್ತಿಯ ಮಾಡಿದುದಕ್ಕೆ ಸರಿಯಲ್ಲ ನೋಡಾ. ಅಖಿಳ ಕ್ರಿಯೆಗಳು ಲಿಂಗಜಂಗಮಾರ್ಚನೆ ಕ್ರಿಯೆಗಳೆಗೆ ಸರಿಯಲ್ಲ ನೋಡಾ. ಯೋಗದ ಬಲದಿಂದ ಸಮಸ್ತ ಭೋಗವ ಪಡೆದ ಫಲವು ಒಂದು ವೇಳೆ ಗುರು-ಲಿಂಗ-ಜಂಗಮಕ್ಕೆ ದೀರ್ಘದಂಡ ನಮಸ್ಕಾರವ ಮಾಡಿ ಸನ್ನಿಧಿಯಲ್ಲಿ ಭೃತ್ಯನಾಗಿರ್ದುದಕ್ಕೆ ಸರಿಯಲ್ಲ ನೋಡಾ. ಪ್ರಾಣನ ಬ್ರಹ್ಮರಂಧ್ರದಲ್ಲಿ ಬಿಡುವ ಯೋಗವು ಪ್ರಾಣಲಿಂಗ ಸಂಬಂಧಕ್ಕೆ ಸರಿಯಲ್ಲ ನೋಡಾ [ಗುಹೇಶ್ವರಾ].