Index   ವಚನ - 803    Search  
 
ಅಯ್ಯಾ! ಶ್ವೇತ, ಪೀತ, ಹರಿತ, ಮಾಂಜಿಷ್ಠ, ಕಪೋತ, ಮಾಣಿಕ್ಯ, ಹಂಡಬಂಡ, ಚಿತ್ರ ವಿಚಿತ್ರ, ಮೊದಲಾದ ಪಶುಗಳ ಮಧ್ಯದಲ್ಲಿ ಕ್ಷೀರ! ಕ್ಷೀರ ಮಧ್ಯದಲ್ಲಿ ದಧಿ, ತಕ್ರ, ನವನೀತ, ಘೃತ, ರುಚಿ, ಚೇತನವಡಗಿರ್ಪಂತೆ, ಸಿಂಪಿಯ ಮಧ್ಯದಲ್ಲಿ ಚಿಜ್ಜಲ ಸ್ವಾತಿಮಿಂಚಿನ ಪ್ರಕಾಶಕ್ಕೆ ಘಟ್ಟಿಗೊಂಡು ಜಲರೂಪವಳಿದು ನಿರಾಕಾರವಾಗಿರ್ಪಂತೆ, ಸಮಸ್ತ ಬೀಜಮಧ್ಯದಲ್ಲಿ ವೃಕ್ಷಂಗಳಡಗಿರ್ಪಂತೆ, ವೃಕ್ಷಂಗಳ ಮಧ್ಯದಲ್ಲಿ ಬೀಜಂಗಳಡಗಿರ್ಪಂತೆ, ಸದ್ಭಕ್ತ ಶಿವಶರಣಗಣಂಗಳ ಮಧ್ಯದಲ್ಲಿ ಗೋಪ್ಯವಾಗಿರ್ದು ಸಮಸ್ತ ಕುಲ-ಛಲ-ಮತಭ್ರಮಿತಂಗಳಿಂದ ತೊಳಲುವ ವೇದಾಂತಿ-ಸಿದ್ಧಾಂತಿ-ಭಿನ್ನಯೋಗಿ ಮೊದಲಾದ ಅದ್ವೈತಜಡಾತ್ಮರ ಕಣ್ಣಿಂಗೆ ಅಗೋಚರವಾಗಿರ್ಪುದು ನೋಡ! ನಿರವಯಶೂನ್ಯಮೂರ್ತಿ ಗುಹೇಶ್ವರಲಿಂಗವು ಚೆನ್ನಬಸವಣ್ಣ.